ನ.1ರಂದು ಕಾಸರಗೋಡಿನ ಕನ್ನಡ ಭವನದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

ಕಾಸರಗೋಡು: ಕನ್ನಡ ಸಂಘ (ನೋಂ), ವಾಣಿಜ್ಯ ತೆರಿಗೆಗಳ ಇಲಾಖೆ, ಬೆಂಗಳೂರು ಹಾಗೂ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಸಹಯೋಗದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ನವೆಂಬರ್ 1ರಂದು ಭಾನುವಾರ ನಡೆಯಲಿದೆ.

ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಿರಂತರ ಕೊಡುಗೆ ನೀಡುತ್ತಿರುವ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯದ ಭವ್ಯ ಸಭಾಂಗಣದಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ (ಕೇಂದ್ರ ಕಚೇರಿ-1) ಎಂ.ಪಿ. ರವಿಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕನ್ನಡ ಭವನ ಮತ್ತು ಗ್ರಂಥಾಲಯದ ಸಂಸ್ಥಾಪಕ ಡಾ. ವಾಮನ್‌ರಾವ್ ಬೇಕಲ್ ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಸ್ವಾಗತಿಸಲಿದ್ದಾರೆ. ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಆರ್.ಡಿ. ಮೇಘಣ್ಣನವರ್ ಘನ ಉಪಸ್ಥಿತಿ ವಹಿಸಲಿದ್ದಾರೆ.

ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಹಾಗೂ ಸೇವಾ ಅಧಿಕಾರಿಗಳ ಸಂಘದ ಅಧ್ಯಕ್ಷ ರಮೇಶ್ ಕುಮಾರ್, ವಾಣಿಜ್ಯ ತೆರಿಗೆಗಳ ಸಿ ಮತ್ತು ಡಿ ದರ್ಜೆ ನೌಕರರ ಸಂಘದ ಅಧ್ಯಕ್ಷ ಧರ್ಮರಾಜು ಸಿ. ಹಾಗೂ ಇಲಾಖೆಯ ಎಸ್‌ಸಿ/ಎಸ್‌ಟಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ. ದೊರೈ ಉಪಸ್ಥಿತರಿರಲಿದ್ದಾರೆ.

ಗಡಿನಾಡಿನ ಹತ್ತು ಸಾಧಕರಿಗೆ ಸನ್ಮಾನ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಡಿನಾಡ ಕಾಸರಗೋಡಿನ ಹತ್ತು ಮಂದಿ ಸಾಧಕರನ್ನು ಕನ್ನಡ ಸಂಘದ ವತಿಯಿಂದ ಗೌರವಿಸಲಾಗುವುದು. ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಡಾ. ಸುರೇಶ್ ನೆಗಳಗುಳಿ, ಪ್ರದೀಪ್ ಬೇಕಲ್, ವಸಂತ ಕೆರೆಮನೆ, ಜಗನ್ನಾಥ ಶೆಟ್ಟಿ ಪಿ.ಕೆ., ಅಖಿಲೇಶ್ ನಗುಮುಗಮ್, ವಸಂತ ಭಾರಡ್ಕ, ಗುರುರಾಜ್ ಕಾಸರಗೋಡು, ಗಿರೀಶ್ ಪಿ.ಎಂ. ಚಿತ್ತಾರಿ ಹಾಗೂ ಮುರಳಿ ಪಾರೆಕಟ್ಟೆ ಸನ್ಮಾನಕ್ಕೆ ಪಾತ್ರರಾಗಲಿದ್ದಾರೆ.

ಸಾಂಸ್ಕೃತಿಕ ಕಲಾ ವೈಭವ

ರಾಜ್ಯೋತ್ಸವದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.), ಕಾಸರಗೋಡು ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾ ವೈಭವ ನಡೆಯಲಿದೆ. ಗುರುರಾಜ್ ಎಂ.ಆರ್. ಮತ್ತು ಮಧು ಕೋಡನಾಡು ಕಾರ್ಯಕ್ರಮದ ನಿರ್ವಹಣೆ ವಹಿಸಲಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಶಯದೊಂದಿಗೆ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕನ್ನಡ ಸಂಘದ ಅಧ್ಯಕ್ಷ ಕೆ.ಸಿ. ಮಂಜುನಾಥ್, ಉಪಾಧ್ಯಕ್ಷೆ ಶಬಿಸ್ತ ತಬಸ್ಸುಂ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಧರ್ಮರೇವಣ್ಣ ಜಿ.ಎಸ್., ಪ್ರಧಾನ ಕಾರ್ಯದರ್ಶಿ ಎಸ್.ಆರ್. ರಂಗರಾಮಯ್ಯ, ಖಜಾಂಚಿ ನಾಗಲಕ್ಷ್ಮಿ ಕೆ.ಎಸ್. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!