
ಮಂಗಳೂರು: ಸಿರಿ ತೋಟಗಾರಿಕೆ ಸಂಘ (ರಿ.) ವತಿಯಿಂದ ತೋಟಗಾರಿಕೆ ಇಲಾಖೆಯ ಅಂಗಸಂಸ್ಥೆಯಾಗಿ ಆಯೋಜಿಸಲಾಗಿರುವ ‘ಸಿರಿ ಸಸ್ಯೋತ್ಸವ’ ಅಕ್ಟೋಬರ್ 30, 31 ಹಾಗೂ ನವೆಂಬರ್ 1ರಂದು ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ನಡೆಯಲಿದೆ.

ಮೂರು ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಸಸ್ಯೋತ್ಸವ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಉತ್ಸವದಲ್ಲಿ ವಿವಿಧ ಬಗೆಯ ತರಕಾರಿ ಗಿಡಗಳು, ಹೂವಿನ ಬೀಜಗಳು ಹಾಗೂ ತರಕಾರಿ ಬೀಜಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಅವಕಾಶವಿರಲಿದೆ.

ಮನೆಯಂಗಳದಲ್ಲಿ ಕೈತೋಟ ಬೆಳೆಸಲು ಆಸಕ್ತಿ ಹೊಂದಿರುವವರು, ತೋಟಗಾರಿಕೆ ಪ್ರಿಯರು ಹಾಗೂ ಸಾರ್ವಜನಿಕರಿಗೆ ಈ ಸಸ್ಯೋತ್ಸವ ಅನುಕೂಲವಾಗಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಸ್ಯೋತ್ಸವದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.


