
ಮಂಜೇಶ್ವರ : ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಕರ್ನಾಟಕದ ಭದ್ರಾವತಿ ಜಫತ್ನಗರದ ಫಯಾಸ್ ಅಹಮ್ಮದ್ (61) ಸಾವನ್ನಪ್ಪಿದ ದುರ್ದೈವಿ. ಇವರು ಉಪ್ಪಳ ಕೈಕಂಬದಲ್ಲಿ ಗುಜರಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.

ಕಾಸರಗೋಡಿನಿಂದ ತಲಪಾಡಿಗೆ ತೆರಳುತ್ತಿದ್ದ ‘ಗಜಾನನ’ ಬಸ್ನಲ್ಲಿ ಇವರು ಪ್ರಯಾಣಿಸುತ್ತಿದ್ದರು. ಬಸ್ ಬಂಡ್ಯೋಡಿಗೆ ತಲುಪಿದಾಗ ಇವರು ದಿಢೀರನೆ ಕುಸಿದುಬಿದ್ದರು. ಕೂಡಲೇ ಜಾಗರೂಕರಾದ ಚಾಲಕ ಜಿತಿನ್ ಹಾಗೂ ಕಂಡಕ್ಟರ್ ಕೆ.ಪಿ. ಪ್ರಣವ್ ಅವರು ಯಾವುದೇ ನಿಲುಗಡೆಗಳಲ್ಲಿ ಬಸ್ ನಿಲ್ಲಿಸದೆ, ನೇರವಾಗಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಬಸ್ ಚಲಾಯಿಸಿಕೊಂಡು ಹೋಗಿದ್ದಾರೆ. ಅಲ್ಪ ಸಮಯದಲ್ಲೇ ಆಸ್ಪತ್ರೆ ತಲುಪಿಸಿ ತುರ್ತು ಚಿಕಿತ್ಸೆ ಕೊಡಿಸಿದರೂ, ದುರದೃಷ್ಟವಶಾತ್ ಅವರ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.ವಿಷಯ ತಿಳಿದು ಮೃತರ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿದ್ದಾರೆ.


