ಮಂಗಳೂರು: ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ, ಕರ್ನಾಟಕದಿಂದ ಪವಿತ್ರ ಉಮ್ರಾ ಯಾತ್ರೆಗೆ ತೆರಳಿರುವ ಯಾತ್ರಾರ್ಥಿಗಳು ಯಾತ್ರೆ ಮುಗಿಸಿ ತಾಯ್ನಾಡಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನಗಳ ಲಭ್ಯತೆ ಇಲ್ಲದ ಕಾರಣ ವಾಪಸಾತಿ ಅನಿಶ್ಚಿತವಾಗಿದ್ದು, ವಸತಿ, ಆಹಾರ, ಔಷಧೋಪಚಾರ ಹಾಗೂ ದೈನಂದಿನ ಖರ್ಚುಗಳನ್ನು ನಿಭಾಯಿಸುವ ಬಗ್ಗೆ ಯಾತ್ರಾರ್ಥಿಗಳು ಆತಂಕ ಎದುರಿಸುತ್ತಿದ್ದಾರೆ. ಇತ್ತ ತಮ್ಮ ಕುಟುಂಬದವರು ಯಾವಾಗ ಮರಳುತ್ತಾರೆ ಎಂಬ ಅನಿಶ್ಚಿತತೆಯಿಂದ ಅವರ ಕುಟುಂಬದವರೂ ಚಿಂತಿತರಾಗಿದ್ದಾರೆ.

ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ಕೇಂದ್ರ ಸರ್ಕಾರ ಹಾಗೂ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ, ಯಾತ್ರಾರ್ಥಿಗಳಿಗೆ ಅಗತ್ಯ ನೆರವು ಒದಗಿಸಬೇಕು. ಅವರ ಸುರಕ್ಷತೆಯನ್ನು ಖಾತರಿಪಡಿಸಿ, ವಿಮಾನ ವ್ಯವಸ್ಥೆ ಕಲ್ಪಿಸುವ ಮೂಲಕ ಆದಷ್ಟು ಶೀಘ್ರವಾಗಿ ತಾಯ್ನಾಡಿಗೆ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರಾದ ಸಿರಾಜ್ ಬಜ್ಪೆ ಅವರು ಆಗ್ರಹಿಸಿದ್ದಾರೆ.
ಯಾತ್ರಾರ್ಥಿಗಳು ಹಾಗೂ ಅವರ ಕುಟುಂಬದವರ ಆತಂಕವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಮಾನವೀಯ ನೆಲೆಯಲ್ಲಿ ತುರ್ತಾಗಿ ಸ್ಪಂದಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

