ಯುಎಇಯಲ್ಲಿ ಮೂರು ಹೊಸ ಪುನರ್ವಸತಿ ಕೇಂದ್ರ ಸ್ಥಾಪನೆಗೆ ತುಂಬೆ ಗ್ರೂಪ್ ಯೋಜನೆ

ಅಜ್ಮಾನ್, ಯುಎಇ: ಪುನರ್ವಸತಿ ಚಿಕಿತ್ಸೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ತುಂಬೆ ಗ್ರೂಪ್ ತನ್ನ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಮುಂದಾಗಿದೆ. ಇದರ ಭಾಗವಾಗಿ ದುಬೈ, ಉಮ್ಮ್ ಅಲ್ ಕುವೈನ್ ಮತ್ತು ಫುಜೈರಾದಲ್ಲಿ ನೂತನ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಶನ್ ಆಸ್ಪತ್ರೆಯ ಚಿಕಿತ್ಸಾ ಸಾಮರ್ಥ್ಯವನ್ನು ಶೇ.30ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.

ಅಜ್ಮಾನ್‌ನ ಅಲ್ ಜುರ್ಫ್‌ನಲ್ಲಿರುವ ತುಂಬೆ ಮೆಡಿಸಿಟಿಯಲ್ಲಿ ನಡೆದ ಪುನರ್ವಸತಿ ಚಿಕಿತ್ಸಾ ಪದ್ಧತಿ ಮತ್ತು ವೈದ್ಯಕೀಯ ನಾವೀನ್ಯತೆ ಕುರಿತ ಆರನೇ ಅಂತಾರಾಷ್ಟ್ರೀಯ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸಮ್ಮೇಳನದಲ್ಲಿ ಈ ಘೋಷಣೆಗಳನ್ನು ಮಾಡಲಾಯಿತು. ಅಜ್ಮಾನ್ ಆಡಳಿತಗಾರರ ಆಸ್ಥಾನದ ಅಧ್ಯಕ್ಷ ಶೇಖ್ ಡಾ. ಮಜೀದ್ ಬಿನ್ ಸಯೀದ್ ಅಲ್ ನುಐಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಆರೋಗ್ಯ ವಿಜ್ಞಾನ ಕಾಲೇಜು ಹಾಗೂ ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಶನ್ ಆಸ್ಪತ್ರೆ ಜಂಟಿಯಾಗಿ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ಯುಎಇ, ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿವಿಧ ಪ್ರದೇಶಗಳ ಭೌತಚಿಕಿತ್ಸಕರು, ಮೂಳೆ ಮತ್ತು ನರರೋಗ ತಜ್ಞರು, ಔದ್ಯೋಗಿಕ ಚಿಕಿತ್ಸಕರು, ವಾಕ್ ಚಿಕಿತ್ಸಕರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮ್ಮೇಳನಕ್ಕೆ ಎಂಟು ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕ್ರೆಡಿಟ್ ಗಂಟೆಗಳ ಮಾನ್ಯತೆ ನೀಡಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ತುಂಬೆ ಗ್ರೂಪ್‌ನ ಆರೋಗ್ಯ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದೀನ್ ತುಂಬೆ, ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಶನ್ ಆಸ್ಪತ್ರೆಯ ಚಿಕಿತ್ಸಾ ಸಾಮರ್ಥ್ಯವನ್ನು ಶೇ.30ರಷ್ಟು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದರು. ಪ್ರಸ್ತುತ ಇರುವ 27 ಚಿಕಿತ್ಸಾ ಪ್ರದೇಶಗಳನ್ನು 39ಕ್ಕೆ ಹಾಗೂ ಚಿಕಿತ್ಸಾ ಹಾಸಿಗೆಗಳ ಸಂಖ್ಯೆಯನ್ನು 36ರಿಂದ 48ಕ್ಕೆ ಹೆಚ್ಚಿಸಲಾಗುತ್ತದೆ. ಆರು ಹೊಸ ಹೊರಾಂಗಣ ಮತ್ತು ಚಿಕಿತ್ಸಾ ಪ್ರದೇಶಗಳನ್ನು ನಿರ್ಮಿಸುವುದರ ಜೊತೆಗೆ ಐದು ಮೀಸಲು ಚಿಕಿತ್ಸಾ ವಲಯಗಳು ಹಾಗೂ ಏಳು ವಿಶೇಷ ಚಿಕಿತ್ಸಾ ಪ್ರದೇಶಗಳನ್ನು ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.

ಚಿಕಿತ್ಸಾ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಉನ್ನತೀಕರಿಸುವ ಉದ್ದೇಶದಿಂದ ರೋಬೋಟಿಕ್ ಮತ್ತು ಡಿಜಿಟಲ್ ಪುನರ್ವಸತಿ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದೆ. ರೋಗಿಗಳಿಗೆ ಮತ್ತೆ ನಡೆಯಲು ನೆರವಾಗುವ ರೋಬೋಟಿಕ್ ಗೇಟ್ ಟ್ರೈನರ್, ನೋವು ನಿರ್ವಹಣೆ ಮತ್ತು ಅಂಗಾಂಶಗಳ ಗುಣಮುಖತೆಗೆ ರೋಬೋಟಿಕ್ ಲೇಸರ್ ಚಿಕಿತ್ಸೆ, ವಾಕ್ ಮತ್ತು ಧ್ವನಿ ವಿಶ್ಲೇಷಣೆಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಹಾಗೂ ಮಕ್ಕಳಿಗೆ ಆಟದ ಮಾದರಿಯಲ್ಲಿ ತರಬೇತಿ ನೀಡುವ ವರ್ಚುವಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನಗಳು ಈ ಯೋಜನೆಯ ಪ್ರಮುಖ ಆಕರ್ಷಣೆಗಳಾಗಿವೆ.

ನರ ಪುನರ್ವಸತಿ, ಬೆನ್ನುಮೂಳೆಯ ಆರೈಕೆ, ಟೆಲಿರಿಹ್ಯಾಬಿಲಿಟೇಶನ್, ವರ್ಚುವಲ್ ರಿಯಾಲಿಟಿ, ಧರಿಸಬಹುದಾದ ಸಂವೇದಕಗಳು, ಫೋನಿಯಾಟ್ರಿಕ್ಸ್ ಮತ್ತು ಕಂಪ್ರೆಷನ್ ಥೆರಪಿ ಸೇರಿದಂತೆ ಪುನರ್ವಸತಿ ಚಿಕಿತ್ಸೆಯಲ್ಲಿನ ನವೀನ ಬೆಳವಣಿಗೆಗಳ ಕುರಿತು ತಜ್ಞರು ವಿಚಾರ ಮಂಡಿಸಿದರು. ದುಬೈ ಹೆಲ್ತ್‌ನ ನರ ಪುನರ್ವಸತಿ ವಿಭಾಗದ ಮುಖ್ಯಸ್ಥ ಡಾ. ಜುವಾನ್ ಕ್ಯಾಮಿಲೊ ಕೊರ್ಟೆಸ್ ಹಾಗೂ ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದ ಫೋನಿಯಾಟ್ರಿಕ್ಸ್ ಪ್ರಾಧ್ಯಾಪಕ ಡಾ. ಗಮಾಲ್ ಯೂಸೆಫ್ ಸೇರಿದಂತೆ ಹಲವು ತಜ್ಞರು ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಸ್ಟಾರ್ ಆಫ್ ದಿ ಇಯರ್ ಪ್ರಶಸ್ತಿ-2026’ ಅನ್ನು ಕರ್ನಾಟಕದ ರಾಷ್ಟ್ರೀಯ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷ ಪ್ರೊ. ಯು.ಟಿ. ಇಫ್ತಿಕಾರ್ ಫರೀದ್ ಅವರಿಗೆ ಪ್ರದಾನ ಮಾಡಲಾಯಿತು. ಅಲೈಡ್ ಹೆಲ್ತ್ ಮತ್ತು ಪುನರ್ವಸತಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿದ ದೀರ್ಘಕಾಲದ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು.

ಇದಲ್ಲದೆ, ಪುನರ್ವಸತಿ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಸೇವೆ ಸಲ್ಲಿಸಿದ 26 ಗಣ್ಯರು ಹಾಗೂ ಸಂಸ್ಥೆಗಳಿಗೆ ‘ಇನ್ನೋವೇಶನ್ ಇನ್ ರಿಹ್ಯಾಬಿಲಿಟೇಶನ್ ಪ್ರಶಸ್ತಿ-2026’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಲ್ಲಿ ದುಬೈ ಕ್ಲಬ್ ಫಾರ್ ಪೀಪಲ್ ಆಫ್ ಡಿಟರ್ಮಿನೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮಜೀದ್ ಅಲ್ ಉಸೈಮಿ, ಎಮಿರೇಟ್ಸ್ ಫಿಸಿಯೋಥೆರಪಿ ಅಸೋಸಿಯೇಷನ್‌ನ ಅಧ್ಯಕ್ಷೆ ನೈಮಾ ಸಲೇಹ್, ಒಮಾನ್ ಫಿಸಿಕಲ್ ಥೆರಪಿ ಅಸೋಸಿಯೇಷನ್‌ನ ಸಹಾಯಕ ಡೀನ್ ಡಾ. ಅಹ್ಮದ್ ಅಲ್ ಖರುಸಿ ಸೇರಿದಂತೆ ಹಲವು ವೈದ್ಯಕೀಯ ತಜ್ಞರು ಮತ್ತು ಸಂಸ್ಥೆಗಳು ಸೇರಿದ್ದವು. ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಅಬುಧಾಬಿ, ಅಲ್ ಖಾಸಿಮಿ ಆಸ್ಪತ್ರೆ, ಅಜ್ಮಾನ್ ವಿಶ್ವವಿದ್ಯಾಲಯ, ಶಾರ್ಜಾ ವಿಶ್ವವಿದ್ಯಾಲಯ ಹಾಗೂ ತುಂಬೆ ಹೆಲ್ತ್‌ಕೇರ್‌ನ ಪ್ರತಿನಿಧಿಗಳಿಗೂ ಗೌರವ ನೀಡಲಾಯಿತು.

ತುಂಬೆ ಗ್ರೂಪ್‌ನ ಆರೋಗ್ಯ ಸೇವೆಗಳ ವಿಸ್ತರಣೆಯ ಭಾಗವಾಗಿ ಹೊಸ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಯುಎಇಯ ವಿವಿಧ ಪ್ರದೇಶಗಳ ರೋಗಿಗಳಿಗೆ ಸುಧಾರಿತ ಚಿಕಿತ್ಸಾ ಸೌಲಭ್ಯಗಳು ಹತ್ತಿರದಲ್ಲೇ ದೊರೆಯಲಿವೆ. ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಆರೋಗ್ಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಮತ್ತು ಕಲಿಕಾ ಅವಕಾಶಗಳನ್ನು ಒದಗಿಸುವುದಕ್ಕೂ ಈ ಕೇಂದ್ರಗಳು ನೆರವಾಗಲಿವೆ ಎಂದು ಡಾ. ತುಂಬೆ ಮೊಯ್ದೀನ್ ತಿಳಿಸಿದರು.

ಸಮ್ಮೇಳನಕ್ಕೆ ಎಕ್ಸೋ ಬಯೋನಿಕ್ಸ್, ಹಪೋಟೆಕ್ ಮೆಡಿಕಲ್, ಎಂ.ಎ.ಎಸ್. ಮೆಡಿಕಲ್ ಸರ್ಜಿಕಲ್ ಆರ್ಟಿಕಲ್ಸ್ ಆ್ಯಂಡ್ ರಿಕ್ವಿಸೈಟ್ಸ್ ಟ್ರೇಡಿಂಗ್, ಬಾಯರ್‌ಫೈಂಡ್ ಮಿಡಲ್ ಈಸ್ಟ್ ಆ್ಯಂಡ್ ಆಫ್ರಿಕಾ, ಮೊಡಾವಿನಾ ಮೆಡಿಕಲ್, ಫೂರಿಯರ್ ಇಂಟೆಲಿಜೆನ್ಸ್ ಹಾಗೂ ಆಲ್ಫಾ ಮೆಡಿಕಲ್ ಆ್ಯಂಡ್ ಡೆಂಟಲ್ ಸರ್ವಿಸಸ್ ಸಂಸ್ಥೆಗಳು ಸಹಕಾರ ನೀಡಿದ್ದವು.

ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಆರೋಗ್ಯ ವಿಜ್ಞಾನ ಕಾಲೇಜಿನಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.gmu.ac.ae ಗೆ ಭೇಟಿ ನೀಡಬಹುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!