ದೇಶ ತೊರೆಯುವಂತೆ ನೀಡಿದ್ದ ನೋಟಿಸ್‌ಗೆ ನಟ ಇಮ್ರಾನ್ ಖಾನ್‌ಗೆ ತಾತ್ಕಾಲಿಕ ರಿಲೀಫ್; ಭಾರತದಲ್ಲೇ ಮುಂದುವರಿಯಲು ಹೈಕೋರ್ಟ್ ಅನುಮತಿ

ಮುಂಬೈ: ಭಾರತ ತೊರೆಯುವಂತೆ ನೀಡಲಾಗಿದ್ದ ನೋಟಿಸ್‌ಗೆ ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಅವರ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಭಾರತದಲ್ಲೇ ಮುಂದುವರಿಯಬಹುದು ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. ಈ ಅರ್ಜಿಯ ವಿಚಾರಣೆಯನ್ನು ನವೆಂಬರ್ 2ರಂದು ಮತ್ತೆ ಕೈಗೆತ್ತಿಕೊಳ್ಳಲಾಗುತ್ತದೆ.

ಮುಂಬೈನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಟನಿಗೆ ದೇಶ ತೊರೆಯುವಂತೆ ಸೂಚಿಸಲಾಗಿತ್ತು. ಅಕ್ಟೋಬರ್ 10ರಂದು ನಡೆದ ಪ್ರತಿಭಟನೆಯ ಸ್ಥಳದಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಇಮಿಗ್ರೇಷನ್ ಮತ್ತು ಫಾರಿನರ್ಸ್ ಕಾಯ್ದೆ, 2025ರ ಉಲ್ಲಂಘನೆ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪದಡಿ ಅಕ್ಟೋಬರ್ 14ರಂದು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅವರಿಗೆ ‘ಲೀವ್ ಇಂಡಿಯಾ’ ನೋಟಿಸ್ ಜಾರಿ ಮಾಡಿತ್ತು. ಬಳಿಕ ಅಕ್ಟೋಬರ್ 17ರಂದು ಅವರ ಸಾಗರೋತ್ತರ ಭಾರತೀಯ ನಾಗರಿಕತ್ವ (OCI) ಕಾರ್ಡ್ ಅನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಉಲ್ಲೇಖಿಸಿ ಕಾರಣ ಕೇಳುವ ನೋಟಿಸ್ ಕೂಡ ನೀಡಲಾಗಿತ್ತು.

ಬಿಜೆಪಿ ನಾಯಕ ಕಿರಿತ್ ಸೋಮಯ್ಯ ನೀಡಿದ ದೂರಿನ ಆಧಾರದಲ್ಲಿ ಹಾಗೂ ಪೊಲೀಸರು ಸಲ್ಲಿಸಿದ ಸಾಕಷ್ಟು ಪುರಾವೆಗಳಿಲ್ಲದ ಎಫ್‌ಐಆರ್ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಮ್ರಾನ್ ಖಾನ್ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.ತಾನು ಎರಡು ವರ್ಷದವನಿದ್ದಾಗಿನಿಂದ ಭಾರತದಲ್ಲೇ ವಾಸಿಸುತ್ತಿದ್ದು, ತನ್ನ ವಿರುದ್ಧ ಬೇರೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ಉಲ್ಲೇಖಿಸಿ ಇಮ್ರಾನ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದಾರೆ. FRRO ಕೈಗೊಂಡಿರುವ ಕ್ರಮವು ಸಂವಿಧಾನಬಾಹಿರ ಮತ್ತು ಅನಿಯಂತ್ರಿತವಾಗಿದೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ನೋಟಿಸ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಹಾಗೂ ಗಡಿಪಾರು ಸೇರಿದಂತೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!