
ಕಾಸರಗೋಡು : ಚೆರ್ಕಳ ಮತ್ತು ಮೇಲ್ಪರಂಬದಲ್ಲಿ ಆಹಾರ ಸುರಕ್ಷತಾ ಇಲಾಖೆ ನಡೆಸಿದ ‘ಆಪರೇಷನ್ ತೆಳಿಮ 2.0’ ದಾಳಿಯಲ್ಲಿ ಗಂಭೀರ ನಿಯಮ ಉಲ್ಲಂಘನೆ ಪತ್ತೆಯಾಗಿದ್ದು, 5 ಸಂಸ್ಥೆಗಳನ್ನು ಮುಚ್ಚಿಸಲಾಗಿದೆ.

ಕರಿದ ತಿಂಡಿ ತಯಾರಿಕಾ ಘಟಕಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, 2 ಸಂಸ್ಥೆಗಳ ಪರವಾನಗಿ ಹಾಗೂ 3 ಸಂಸ್ಥೆಗಳ ನೋಂದಣಿಯನ್ನು ಅಮಾನತುಗೊಳಿಸಿದ್ದಾರೆ.

ಆರೋಗ್ಯಕ್ಕೆ ಹಾನಿಕಾರಕವಾಗಿದ್ದ 39 ಲೀಟರ್ ಅಡುಗೆ ಎಣ್ಣೆ, 200 ಸಮೋಸ ಮತ್ತು 35 ಕೆಜಿ ಕರಿದ ತಿಂಡಿಗಳನ್ನು ಜಪ್ತಿ ಮಾಡಿ ನಾಶಪಡಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ ಈ ತಪಾಸಣೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಆಹಾರ ಭದ್ರತಾ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಸಿಸ್ಟೆಂಟ್ ಕಮಿಷನರ್ ಎಸ್. ಸಂಗೀತ್ ಎಚ್ಚರಿಸಿದ್ದಾರೆ.

