2027ರ ಜನವರಿ 25ರಿಂದ ದೇಶಾದ್ಯಂತ ಜನಗಣತಿ ಆರಂಭ: 40 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ

ನವದೆಹಲಿ: ದೇಶಾದ್ಯಂತ ಮುಂದಿನ ವರ್ಷ ಜನವರಿ 25ರಿಂದ ಜನಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಫೆಬ್ರವರಿ 28ರವರೆಗೆ ಜನಗಣತಿ ಕಾರ್ಯ ನಡೆಯಲಿದೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿಯೂ ಈ ವರ್ಷವೇ ಜನಗಣತಿ ಪ್ರಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

ಮನೆಮನೆಗೆ ತೆರಳಿ ಜನಗಣತಿ ನಡೆಸುವ ಮೊದಲು ನಾಗರಿಕರಿಗೆ ಸ್ವಯಂ ಗಣತಿ (Self Enumeration) ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಜನಗಣತಿಯಲ್ಲಿ ಒಟ್ಟು 40 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಜಾತಿ, ಧರ್ಮ, ತಂದೆ-ತಾಯಿಯ ಜನ್ಮ ದಿನಾಂಕ, ಬ್ಯಾಂಕ್ ಖಾತೆಗಳ ಸಂಖ್ಯೆ, ಜೀವನ ಸಂಗಾತಿಯ ಹೆಸರು ಹಾಗೂ ದೂರವಾಣಿ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರಲಿವೆ. ಈ ಬಾರಿ ಒಟ್ಟು 13 ಹೊಸ ಪ್ರಶ್ನೆಗಳನ್ನು ಸೇರಿಸಲಾಗಿದೆ.

2027ರ ಜನವರಿ 10ರಿಂದ 24ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಇದು ಕಡ್ಡಾಯವಾಗಿರುವುದಿಲ್ಲ. ಜನಗಣತಿ ವೇಳೆ ಸಂಗ್ರಹಿಸಲಾದ ಮಾಹಿತಿಯನ್ನು ಪರಿಶೀಲಿಸಿ, ತಿದ್ದುಪಡಿ ಮಾಡಿಕೊಳ್ಳುವ ಪ್ರಕ್ರಿಯೆ 2027ರ ಮಾರ್ಚ್ 1ರಿಂದ 5ರವರೆಗೆ ನಡೆಯಲಿದೆ.ಭಾರತದಲ್ಲಿ 1948ರ ಜನಗಣತಿ ಕಾಯ್ದೆ ಮತ್ತು 1990ರ ಜನಗಣತಿ ನಿಯಮಗಳ ಅಡಿಯಲ್ಲಿ ಜನಗಣತಿ ನಡೆಸಲಾಗುತ್ತದೆ. ದೇಶದಲ್ಲಿ ಕೊನೆಯ ಬಾರಿಗೆ 2011ರಲ್ಲಿ ಎರಡು ಹಂತಗಳಲ್ಲಿ ಜನಗಣತಿ ನಡೆದಿತ್ತು.

2021ರಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಜನಗಣತಿಯ ಮೊದಲ ಹಂತದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿತ್ತು. ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2020ರ ಏಪ್ರಿಲ್ 1ರಿಂದಲೇ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ದೇಶಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದ ಹಿನ್ನೆಲೆಯಲ್ಲಿ ಜನಗಣತಿ ಕಾರ್ಯವನ್ನು ಮುಂದೂಡಲಾಗಿತ್ತು.ದೇಶದ ಅತಿದೊಡ್ಡ ಜನಸಂಖ್ಯಾ ಗಣತಿ ಪ್ರಕ್ರಿಯೆಗಾಗಿ ಕೇಂದ್ರ ಸಚಿವ ಸಂಪುಟವು 11,718 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!