
ಕಡಬ: ಕಳ್ಳತನ ಪ್ರಕರಣಗಳಲ್ಲಿ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ವಿಶಾಲ್ ಪೊಂಕೆ (30) ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 110/2016, 112/2016, 113/2016 ಹಾಗೂ 114/2016ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 457 ಮತ್ತು 380ರಂತೆ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ದೊಡ್ಡಬಳ್ಳಾಪುರದ ನರಸಿಂಹ ಅಲಿಯಾಸ್ ರಾಜು, ಮಹಾರಾಷ್ಟ್ರದ ವಿಜಯ್ ಸುರೇಶ್ ಪೊಂಕೆ, ನವೀನ್ ಚಂದ್ರ ಸಿಂಗ್, ಉತ್ತರ ಕನ್ನಡದ ಚಂದ್ರಕಾಂತ್ ಪೂಜಾರಿ ಹಾಗೂ ಮಂಡ್ಯದ ಪ್ರಕಾಶ್ ಬಹದ್ದೂರ್ ಅವರಿಗೆ ಈಗಾಗಲೇ ಪುತ್ತೂರಿನ ACJ ಮತ್ತು JMFC ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು.

ಇದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರ ಮೂಲದ ವಿಶಾಲ್ ಪೊಂಕೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಆತನ ಪತ್ತೆಗಾಗಿ ಪೊಲೀಸರು ಪ್ರಯತ್ನ ನಡೆಸಿ, ನ್ಯಾಯಾಲಯದಿಂದ ಪ್ರೊಕ್ಲಮೇಷನ್ ಆದೇಶವನ್ನೂ ಹೊರಡಿಸಲಾಗಿತ್ತು.
ಇದೀಗ, ದಿನಾಂಕ 30-10-2026ರಂದು ಆರೋಪಿ ವಿಶಾಲ್ ಪೊಂಕೆ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಎರಡನೇ ACJ ಮತ್ತು JMFC ನ್ಯಾಯಾಲಯ (ಸಂಚಾರಿ ನ್ಯಾಯಾಲಯ, ಕಡಬ) ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಿಶಾಲ್ ಪೊಂಕೆ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ MOB ತೆರೆಯಲಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಯೂ ಅಪರಾಧ ಸಂಖ್ಯೆ 105/2016ರ ಅಡಿಯಲ್ಲಿ ಐಪಿಸಿ ಕಲಂ 457 ಮತ್ತು 380ರಂತೆ ಪ್ರಕರಣ ದಾಖಲಾಗಿದ್ದು, ವಿಚಾರಣೆಯಲ್ಲಿದೆ.

