ಮಂಗಳೂರು: ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಮಹತ್ವದ ಕೊಡುಗೆ ಹಾಗೂ ರೆ. ಡಾ. ಫರ್ಡಿನಾಂಡ್ ಕಿಟ್ಟೆಲ್ ಅವರ ಜೀವನ ಮತ್ತು ಸಾಹಿತ್ಯಿಕ ಸಾಧನೆಗಳ ಕುರಿತು ನಡೆಸಿರುವ ಸಂಶೋಧನೆಯನ್ನು ಗುರುತಿಸಿ, ಕಿಟ್ಟೆಲ್ ಫೌಂಡೇಶನ್ ವತಿಯಿಂದ ನೀಡಲಾಗುವ 2026ನೇ ಸಾಲಿನ ಪ್ರತಿಷ್ಠಿತ ರೆ. ಡಾ. ಫರ್ಡಿನಾಂಡ್ ಕಿಟ್ಟೆಲ್ ಪ್ರಶಸ್ತಿಗೆ ಮಂಗಳೂರಿನ ಪ್ರೊ. ಡಾ. ಎ.ವಿ. ನಾವಡ ಹಾಗೂ ಧಾರವಾಡದ ಪ್ರೊ. ಡಾ. ವೀರಣ್ಣ ರಾಜೂರ ಆಯ್ಕೆಯಾಗಿದ್ದಾರೆ.

ಈ ಕುರಿತು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಿಟ್ಟೆಲ್ ಫೌಂಡೇಶನ್ ಅಧ್ಯಕ್ಷರು ಹಾಗೂ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಎಚ್.ಎಂ. ವ್ಯಾಟ್ಸನ್ ಅವರು, ನವೆಂಬರ್ 15ರಂದು ಭಾನುವಾರ ಬೆಳಿಗ್ಗೆ 11.30ಕ್ಕೆ ಮಂಗಳೂರಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಸಚಿವ ಯು.ಟಿ. ಖಾದರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ತಲಾ 25 ಸಾವಿರ ರೂಪಾಯಿ ನಗದು ಪುರಸ್ಕಾರ ಹಾಗೂ ರೆ. ಡಾ. ಫರ್ಡಿನಾಂಡ್ ಕಿಟ್ಟೆಲ್ ಅವರ ಸ್ಮರಣಾರ್ಥ ನೀಡಲಾಗುವ ಕಿರುಪ್ರತಿಮೆಯನ್ನು ಒಳಗೊಂಡಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರು ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಡಾ. ಧನಂಜಯ ಕುಂಬ್ಳೆ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕೇಸಸ್ ಅಧ್ಯಕ್ಷರಾದ ರೈಟ್ ರೆವರೆಂಡ್ ಹೇಮಚಂದ್ರ ಕುಮಾರ್, ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸ್ಥಾಪಕ ಕುಲಪತಿಗಳಾದ ಪ್ರೊ. ಎಸ್. ಜಾಫೆಟ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಶ್ರೀನಾಥ್ ಎಂ.ಪಿ. ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಿಟ್ಟೆಲ್ ಫೌಂಡೇಶನ್ ಅಧ್ಯಕ್ಷರು ಹಾಗೂ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಎಚ್.ಎಂ. ವ್ಯಾಟ್ಸನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ರೆ. ಡಾ. ಫರ್ಡಿನಾಂಡ್ ಕಿಟ್ಟೆಲ್ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸುವುದು ಹಾಗೂ ಅವರ ಜೀವನ, ಸಾಹಿತ್ಯಿಕ ಸಾಧನೆ ಮತ್ತು ಕನ್ನಡ ಸೇವೆಯ ಕುರಿತು ಹೆಚ್ಚಿನ ಸಂಶೋಧನೆಗೆ ಪ್ರೋತ್ಸಾಹ ನೀಡುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದ ಶ್ರೀಮಂತ ಭಾಷಾ ಮತ್ತು ಸಾಹಿತ್ಯ ಪರಂಪರೆಯನ್ನು ಗುರುತಿಸಿ, ಸಾಧಕರನ್ನು ಗೌರವಿಸುವ ಕಾರ್ಯವನ್ನು ಕಿಟ್ಟೆಲ್ ಫೌಂಡೇಶನ್ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೆ. ಡಾ. ಸಂದೀಪ್ ಥಿಯೋಫಿಲ್, ರೆ. ಡಾ. ಎಫ್. ಅನಿಲ್ ಕುಮಾರ್ ಹಾಗೂ ರೆ. ಕೆ. ಸಾಗರ್ ಸುಂದರ್ ರಾಜ್ ಉಪಸ್ಥಿತರಿದ್ದರು.

