
ಬಂಟ್ವಾಳ: ಪಾದಚಾರಿಗೆ ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಯಲು ಯತ್ನಿಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಮಾಣಿ ನಿವಾಸಿ ವಿಕೇಶ್ ಕೆ. (32) ಎಂಬವರು ನೀಡಿದ ದೂರಿನ ಪ್ರಕಾರ, ದಿನಾಂಕ 09-11-2026ರಂದು ಸಂಜೆ ಮಾಣಿ ಜಂಕ್ಷನ್ನ ಮೈದಾನದಲ್ಲಿರುವ ಪಟಾಕಿ ಅಂಗಡಿಯ ಬಳಿ ನಿಂತಿದ್ದ ವೇಳೆ, ಪರಿಚಯಸ್ಥ ಜಗದೀಶ್ ಜೈನ್ ಎಂಬಾತ ಬೊಲೆರೋ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಪ್ರಾಣಾಪಾಯದಿಂದ ಪಾರಾಗಲು ವಿಕೇಶ್ ಅವರು ಬೊಲೆರೋ ವಾಹನದ ಬಾನೆಟ್ ಮೇಲೆ ಹಾರಿ ಬಳಿಕ ಮಣ್ಣಿನ ಮೇಲೆ ಬಿದ್ದಿದ್ದು, ಎಡಕಾಲಿನ ಮೊಣಗಂಟಿಗೆ ಗಾಯವಾಗಿದೆ. ಇದೇ ಸಂದರ್ಭದಲ್ಲಿ ವಿಕೇಶ್ ಅವರ ಸಂಬಂಧಿಕ ತೀರ್ಥಪ್ರಸಾದ್ ಅವರಿಗೂ ವಾಹನದಿಂದ ಡಿಕ್ಕಿ ಹೊಡೆಯಲು ಆರೋಪಿ ಯತ್ನಿಸಿದ್ದು, ಅವರು ಕೂಡ ತಪ್ಪಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ವೇಳೆ ಸ್ಥಳದಲ್ಲಿ ಜನರು ಸೇರುವುದನ್ನು ಕಂಡ ಆರೋಪಿ, ವಿಕೇಶ್ ಅವರನ್ನು ಅವಾಚ್ಯವಾಗಿ ನಿಂದಿಸಿ, ಮುಂದಕ್ಕೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 232/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 109, 118(1), 352 ಹಾಗೂ 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿ ಜಗದೀಶ್ ಜೈನ್ನನ್ನು ಪೊಲೀಸರು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

