ಪಾಲಕ್ಕಾಡ್: ಪ್ರಿಯಕರನನ್ನು ದೂರವಿಡುವ ಉದ್ದೇಶದಿಂದ ಆತನ ಮೇಲೆ ಹಲ್ಲೆ ನಡೆಸಲು ಸುಪಾರಿ ನೀಡಿದ ಯುವತಿ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಟ್ಟಾಂಬಿ ನಿವಾಸಿ ಪನಂಗಾಟ್ಟುತೊಡಿ ಸಫಾನ (19), ಆಕೆಯ ಸ್ನೇಹಿತರಾದ ತಿರೂರು ನಾರ್ತ್ ಅನ್ನಾರ ನಿವಾಸಿ ನಾದಿಯಾ (20), ಪೂತಂಕುಲಂಗರ ನಿವಾಸಿ ರಬೀಬ (25), ಪರವಣ್ಣ ನಿವಾಸಿಗಳಾದ ಇರ್ಷಾದ್ (28) ಹಾಗೂ ಅಸರ್‌ಉದ್ದೀನ್ (25) ಎಂದು ಗುರುತಿಸಲಾಗಿದೆ.

ಪಟ್ಟಾಂಬಿ ಮೂಲದ ಯುವಕನನ್ನು ದೂರವಿಡುವ ಉದ್ದೇಶದಿಂದ ಯುವತಿ ತನ್ನ ಸ್ನೇಹಿತರ ಮೂಲಕ ಹಲ್ಲೆಗೆ ಸುಪಾರಿ ನೀಡಿದ್ದಳು ಎನ್ನಲಾಗಿದೆ.

ಕಳೆದ ದಿನ ಮಧ್ಯರಾತ್ರಿ ತನ್ನ ಪ್ರಿಯತಮೆಯನ್ನು ಹುಡುಕಿಕೊಂಡು ತಿರೂರಿಗೆ ಬಂದಿದ್ದ ಯುವಕನನ್ನು ಆರೋಪಿಗಳು ಗುರಿಯಾಗಿಸಿಕೊಂಡಿದ್ದರು. ಯುವತಿಯನ್ನು ಭೇಟಿಮಾಡಿಸುವುದಾಗಿ ನಂಬಿಸಿ ಆತನನ್ನು ಕಾರಿನಲ್ಲಿ ಕರೆದೊಯ್ದು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಯುವಕನ ಮೊಬೈಲ್ ಫೋನ್‌ನ್ನೂ ಕಸಿದುಕೊಂಡಿದ್ದಾರೆ.

ಬಂಧಿತ ಆರೋಪಿಗಳಾದ ಇರ್ಷಾದ್ ಮತ್ತು ಅಸರ್‌ಉದ್ದೀನ್ ಈ ಹಿಂದೆ ಮಾದಕವಸ್ತು ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನೂ ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

