ಕಾಸರಗೋಡು : ಶಿರಿಯಾ ನದಿಯಲ್ಲಿ ರಾಷ್ಟ್ರೀಯ ಮಟ್ಟದ ಗಾಳ ಹಾಕುವ ಮೀನುಗಾರಿಕೆ ಸ್ಪರ್ಧೆ ನವೆಂಬರ್ 15ರಂದು ನಡೆಯಲಿದೆ. ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಮಂಡಳಿ ಹಾಗೂ ಕಾಸರಗೋಡು ಬ್ಲಾಕ್ ಪಂಚಾಯತ್ ಜಂಟಿಯಾಗಿ, ಕುಂಬಳೆ ಗ್ರಾಮ ಪಂಚಾಯತ್ ಮತ್ತು ಭಾರತ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಅರಿಕ್ಕಾಡಿಯಲ್ಲಿ ಸ್ಪರ್ಧೆಯನ್ನು ಆಯೋಜಿಸಿವೆ.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಗಾಳ ಹಾಕುವ ಸ್ಪರ್ಧೆ ನಡೆಯುತ್ತಿದ್ದು, ನದಿ ತೀರದ ಪ್ರವಾಸೋದ್ಯಮ ಸಾಧ್ಯತೆಗಳನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವುದು ಮತ್ತು ಆಂಗ್ಲಿಂಗ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ವೃತ್ತಿಪರ ಗಾಳ ಹಾಕುವ ಮೀನುಗಾರರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಸ್ಪರ್ಧೆ ನಡೆಯಲಿದೆ. ಸ್ಪರ್ಧಿಗಳಿಗೆ ಗಾಳ ಹಾಕುವ ಸ್ಥಳಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಕೃತಕ ಬೆಟ್ಗಳನ್ನು ಮಾತ್ರ ಬಳಸಲು ಅವಕಾಶವಿದ್ದು, ಹಿಡಿದ ಮೀನುಗಳ ಒಟ್ಟು ತೂಕದ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ತೂಕ ದಾಖಲಿಸಿದ ಬಳಿಕ ಮೀನುಗಳನ್ನು ಮತ್ತೆ ನದಿಗೆ ಬಿಡುವ ಮೂಲಕ ಪರಿಸರ ಸ್ನೇಹಿ ಸ್ಪರ್ಧೆಗೆ ವ್ಯವಸ್ಥೆ ಮಾಡಲಾಗಿದೆ.


ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವವರಿಗೆ 40 ಸಾವಿರ ರೂಪಾಯಿ, ದ್ವಿತೀಯ ಸ್ಥಾನಕ್ಕೆ 30 ಸಾವಿರ ರೂಪಾಯಿ ಹಾಗೂ ತೃತೀಯ ಸ್ಥಾನಕ್ಕೆ 20 ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತದೆ.
ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಸ್ಪರ್ಧೆಗೆ ಚಾಲನೆ ನೀಡಲಿದ್ದು, ಶಾಸಕ ಎ.ಕೆಎಂ. ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅರಿಕ್ಕಾಡಿಯ ಕೆಪಿಎಸ್ ರೆಸಾರ್ಟ್ನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.

ಮೊದಲು ನೋಂದಾಯಿಸಿಕೊಳ್ಳುವ 100 ಮಂದಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ನೋಂದಣಿ ಶುಲ್ಕ 500 ರೂಪಾಯಿ. ಆಸಕ್ತರು www.dtpckasaragod.com ವೆಬ್ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ 04994 256450 ಅಥವಾ 8943992414 ಸಂಪರ್ಕಿಸಬಹುದು.

