ಕಾಸರಗೋಡು : ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಚರ್ಲಡ್ಕದಲ್ಲಿ ಒಂದೇ ಆವರಣದಲ್ಲಿದ್ದ ತಾಯಿ ಮತ್ತು ಮಗಳ ಮನೆಗಳಿಗೆ ಏಕಕಾಲದಲ್ಲಿ ನುಗ್ಗಿದ ಖದೀಮರು, ಲಕ್ಷಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಚರ್ಲಡ್ಕದ ಮರಿಯಮ್ಮ ಹಾಗೂ ಅವರ ಪುತ್ರಿ ಆಯಿಶಾ ಎಂಬುವವರ ಮನೆಗಳೇ ಕಳ್ಳರ ಕೈಚಳಕಕ್ಕೆ ತುತ್ತಾಗಿವೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಜಡಿದು ಕುಟುಂಬದವರು ಸಂಬಂಧಿಕರ ಮನೆಗೆ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು, ಎರಡೂ ಮನೆಗಳ ಮುಂಭಾಗದ ಬಾಗಿಲುಗಳನ್ನು ಮುರಿದು ಒಳನುಗ್ಗಿದ್ದಾರೆ. ಒಟ್ಟು 7 ಪವನ್ ಚಿನ್ನಾಭರಣ ಕಳುವಾಗಿರುವುದಾಗಿ ತಿಳಿದುಬಂದಿದೆ.

ಶುಕ್ರವಾರ ಸಂಜೆ ವಾಪಸ್ ಬಂದು ನೋಡಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧಾವಿಸಿರುವ ಬದಿಯಡ್ಕ ಪೊಲೀಸರು ಮಹಜರು ನಡೆಸಿ, ತಲೆಮರೆಸಿಕೊಂಡಿರುವ ಕಳ್ಳರ ಪತ್ತೆಗಾಗಿ ತೀವ್ರ ಶೋಧ ಮುಂದುವರಿಸಿದ್ದಾರೆ.

