ಕಾಸರಗೋಡು: ಅತ್ಯಾಚಾರ, ಪೋಕ್ಸೋ, ವೀಸಾ ವಂಚನೆ ಹಾಗೂ ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣ ಮತ್ತು ಹಣ ದೋಚಿದ ಆರೋಪ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕಾಸರಗೋಡು ಜಿಲ್ಲೆಯ ಚೆರುವತ್ತೂರು ನಿವಾಸಿ ಮುತಲೀಬ್ ಸಿ.ಎಚ್. ಎಂಬಾತನನ್ನು ಕೇರಳ ಪೊಲೀಸರು ಮೈಸೂರಿನ ಹುಣಸೂರಿನಲ್ಲಿ ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ರಾಜ್ ಅವರ ನಿರ್ದೇಶನದಂತೆ, ಕಾಂಞಂಗಾಡ್ ಡಿವೈಎಸ್ಪಿ ಎಂ.ವಿ. ಅನಿಲ್ ಕುಮಾರ್ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ.

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ, ಪೊಲೀಸರ ಕೈಗೆ ಸಿಗದಂತೆ 26ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳ ಬಳಕೆ ಮಾಡಿದ್ದ ಎನ್ನಲಾಗಿದೆ. ವಾಟ್ಸ್ಆ್ಯಪ್ ಕರೆಗಳು ಹಾಗೂ ಸಾರ್ವಜನಿಕ ವೈಫೈ ಸಂಪರ್ಕವನ್ನು ಬಳಸಿಕೊಂಡು ವಿದೇಶಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಮುಂದುವರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರ್ ತಂತ್ರಜ್ಞಾನದ ನೆರವಿನಿಂದ ಆರೋಪಿಯ ಚಲನವಲನಗಳ ಮೇಲೆ ನಿಗಾ ಇರಿಸಿದ ಪೊಲೀಸರು, ವೀಸಾ ಆಕಾಂಕ್ಷಿಗಳ ಸೋಗಿನಲ್ಲಿ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 11ರಂದು ಬಂಧಿಸಲಾದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

