ಉಪ್ಪಳ: ಪಚಂಬಳ ಸಭಾ ನಗರದಲ್ಲಿ 63 ವರ್ಷದ ಮುಹಮ್ಮದ್ ಸೇರಿದಂತೆ ನಾಲ್ವರ ಮೇಲೆ ಚೂರಿಯಿಂದ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಚಂಬಳ ನಿವಾಸಿ ಅಬ್ದುಲ್ ಇಷ್ಪಾದ್ ಅಲಿಯಾಸ್ ಲುಟ್ಟಾಪಿ ಇಷ್ಪಾದ್ (34) ಬಂಧಿತ ಆರೋಪಿಯಾಗಿದ್ದಾನೆ.

ಮನೆಯಲ್ಲಿ ಮಲಗಿದ್ದ ಮುಹಮ್ಮದ್ ಅವರನ್ನು ನಿದ್ರೆಯಿಂದ ಎಬ್ಬಿಸಿ ಅಬ್ದುಲ್ ಇಷ್ಪಾದ್ ಹಾಗೂ ಆತನ ಸಹೋದರ ದಿಲ್ಹಾದ್ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುಹಮ್ಮದ್ ಅವರನ್ನು ರಕ್ಷಿಸಲು ಮುಂದಾದ ಎಸ್.ಎ. ಶರೀಫ್, ರಫೀಕ್ ಹಾಗೂ ಮುಹಮ್ಮದ್ ನವಾಸ್ ಅವರ ಮೇಲೆಯೂ ಹಲ್ಲೆ ನಡೆಸಿ ಚೂರಿಯಿಂದ ಇರಿದು ಗಾಯಗೊಳಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮುಹಮ್ಮದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಬಳಿಕ ಬೆಂಗಳೂರು ಹಾಗೂ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಊರಿಗೆ ಮರಳಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ವಿಶೇಷ ತಂಡದೊಂದಿಗೆ ಪಚಂಬಳದಲ್ಲಿರುವ ಆತನ ಮನೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯ ವಿರುದ್ಧ ಈಗಾಗಲೇ ಐದು ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಒಟ್ಟು ಹತ್ತು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಪ್ರಕರಣದ ಇನ್ನೊಬ್ಬ ಆರೋಪಿ ದಿಲ್ಹಾದ್‌ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

