ಬೆಸೆಂಟ್ ಸಂಧ್ಯಾ ಕಾಲೇಜಿನ ಸುವರ್ಣ ಮಹೋತ್ಸವ ವರ್ಷಾಚರಣೆಗೆ ಚಾಲನೆ

ಮಂಗಳೂರು: ನಗರದ ಬೆಸೆಂಟ್ ಸಂಧ್ಯಾ ಕಾಲೇಜಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಚಿಕ್ಕಮಗಳೂರು ಇಲ್ಲಿನ ಇಂಗ್ಲಿಷ್ ಉಪನ್ಯಾಸಕರಾದ ಪ್ರವೀಣ್ ಪೂಜಾರಿ ಅವರು, ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ವ್ಯಕ್ತಿಯ ಬದುಕಿಗೆ ಮೌಲ್ಯ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ತುಂಬುವ ಶಕ್ತಿಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದರು.


ಕಾರ್ಯಕ್ರಮದ ಮುಖ್ಯ ಅತಿಥಿ ಸಿಎ ಗೌತಮ್ ಪೈ ಡಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಜ್ಞಾನ, ಕೌಶಲ್ಯ ಮತ್ತು ಪರಿಶ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಶ್ರೀ ಶಬರಿ ಕ್ಯಾಟರರ್ಸ್ ಮಂಗಳೂರು ಇದರ ಮಾಲಕರಾದ ಲಯನ್ ರಾಜೇಶ್ ಶೆಟ್ಟಿ ಶಬರಿ ಅವರು ಮಾತನಾಡಿ, ಐದು ದಶಕಗಳ ಶೈಕ್ಷಣಿಕ ಸೇವೆಯನ್ನು ಪೂರೈಸಿರುವ ಬೆಸೆಂಟ್ ಈವಿನಿಂಗ್ ಕಾಲೇಜು ಅನೇಕ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ. ಸಂಸ್ಥೆಯ ಸಾಧನೆ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ. ಸಂಸ್ಥೆಯೊಂದಿಗಿನ ತಮ್ಮ ಬಾಂಧವ್ಯ ಮತ್ತು ಸುವರ್ಣ ಮಹೋತ್ಸವದ ಮಹತ್ವವನ್ನು ಹಂಚಿಕೊಂಡರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಸುಮಂತ್ ರಾವ್ ಅವರು ಮಾತನಾಡಿ, ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಉಪನ್ಯಾಸಕರು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರ ಕೊಡುಗೆಯನ್ನು ಸ್ಮರಿಸಿದರು. ಅವರು ಹಳೆ ವಿದ್ಯಾರ್ಥಿಗಳಾಗಿ ಸಂಸ್ಥೆಯೊಂದಿಗಿನ ತಮ್ಮ ಬಾಂಧವ್ಯ ಮತ್ತು ಸುವರ್ಣ ಮಹೋತ್ಸವದ ಮಹತ್ವವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ಅಣ್ಣಪ್ಪ ನಾಯಕ್ ಅವರು ಮಾತನಾಡಿ, 1976ರಲ್ಲಿ ಆರಂಭಗೊಂಡ ಸಂಸ್ಥೆಯು ಐದು ದಶಕಗಳ ಸುದೀರ್ಘ ಪಯಣದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಸಂಸ್ಥೆಯ ಈ ಸಾಧನೆಯ ಹಿಂದೆ ಶ್ರಮಿಸಿದ ಎಲ್ಲರ ಸಹಕಾರ ಮತ್ತು ಸಮರ್ಪಣಾಭಾವ ಸ್ಮರಣೀಯ ಎಂದರು.

ಕಾಲೇಜಿನ ಸಂಚಾಲಕಿ ಲಲಿತಾ ಜಿ. ಮಲ್ಯ ಕಾರ್ಯಕ್ರಮಕ್ಕೆ ಶುಭ ಕೋರಿದರು.ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಸೆಂಟ್ ಸಂಧ್ಯಾ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಸಾದ್ ಮರೋಳಿ, ವಿಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಸುರೇಶ್ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆದಿತ್ಯ ಶೆಟ್ಟಿ, ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ದಿಗಂತ್ ಎಸ್ ಪಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ. ಗೋಪಾಲರೆಡ್ಡಿ ರಿಟ್ಟಿ ಸ್ವಾಗತಿಸಿದರು ಹಾಗೂ ಐಕ್ಯೂಎಸಿ ಸಂಯೋಜಕ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ಕುಮಾರ್ ಎಂ.ಜಿ. ವಂದಿಸಿದರು. ಉಪನ್ಯಾಸಕಿ ಶ್ರೀವಿದ್ಯಾ ಬಿ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!