ಕಾಸರಗೋಡು: ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಹಳೆಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಕಾಸರಗೋಡು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

1990ರಲ್ಲಿ ಕಾಸರಗೋಡಿನ ತಳಂಗರೆ ತೆರುವತ್ ನಿವಾಸಿ ಪ್ರದೀಪ್ ಎಂಬಾತನನ್ನು ತಳಂಗರೆ ಕಡವತ್‌ಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈಯ್ಯಲಾಗಿತ್ತು.

ಈ ಪ್ರಕರಣದ ಎರಡನೇ ಆರೋಪಿಯಾಗಿರುವ ‘ಗಬ್ಬಾರ್ ಅಶ್ರಫ್’ ಎಂಬಾತ ಘಟನೆಯ ಬಳಿಕ ನಾಪತ್ತೆಯಾಗಿದ್ದನು. ಈತನನ್ನು ನ್ಯಾಯಾಲಯವು ತಲೆಮರೆಸಿಕೊಂಡಿರುವ ಆರೋಪಿಯೆಂದು ಘೋಷಿಸಿತ್ತು.

ಜಿಲ್ಲಾ ಪೊಲೀಸ್ ವರಿಷ್ಠರ ವಿಶೇಷ ದಳದ ಕಾರ್ಯಾಚರಣೆ ಹಾಗೂ ತನಿಖೆಯ ಫಲವಾಗಿ, ಆರೋಪಿ ಹೈದರಾಬಾದ್‌ನ ಚಾರ್ ಮಿನಾರ್ ಪ್ರದೇಶದಲ್ಲಿ ಅಡಗಿಕೊಂಡಿರುವುದು ಪತ್ತೆಯಾಗಿದೆ. ಅಲ್ಲಿಂದ ಆತನನ್ನು ಬಂಧಿಸಿ ಕಾಸರಗೋಡಿಗೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


