ನುಗ್ಗೆ ಸೊಪ್ಪಿನಿಂದ ಪೌಷ್ಟಿಕ ಉತ್ಪನ್ನಗಳ ತಯಾರಿ : ಮಂಜೇಶ್ವರದಲ್ಲಿ ಪ್ರಾಯೋಗಿಕ ತರಬೇತಿ

ಮಂಜೇಶ್ವರ : ನುಗ್ಗೆ ಸೊಪ್ಪಿನ ಪೌಷ್ಟಿಕ ಮಹತ್ವವನ್ನು ಪರಿಚಯಿಸುವುದು ಹಾಗೂ ಅದರ ಆಧಾರದ ಮೇಲೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ, ಮಂಜೇಶ್ವರ ವಿಸ್ತರಣಾ ತರಬೇತಿ ಕೇಂದ್ರದ (ETC Manjeswar) ವತಿಯಿಂದ ನವೆಂಬರ್ 7, 2026ರ ಶನಿವಾರದಂದು “ನುಗ್ಗೆ ಸೊಪ್ಪಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ” ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಬೆಳಿಗ್ಗೆ 10.30ಕ್ಕೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಂಜೇಶ್ವರ ವಿಸ್ತರಣಾ ತರಬೇತಿ ಕೇಂದ್ರದ ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ವಿಕ್ರಮ್ ಎಚ್.ಸಿ. ಅವರು ಉದ್ಘಾಟಿಸಿದರು. ವಿಸ್ತರಣಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅರುಳರಸನ್ ಜಿ.ಎಸ್. ಅವರು ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದ ತಾಂತ್ರಿಕ ಉಪನ್ಯಾಸವನ್ನು ಗೃಹವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರುತಿ ಪಿ. ಅವರು ನಡೆಸಿಕೊಟ್ಟರು. ನುಗ್ಗೆ ಸೊಪ್ಪಿನ ಪೌಷ್ಟಿಕಾಂಶಗಳು, ಆರೋಗ್ಯ ಪ್ರಯೋಜನಗಳು, ಅತಿಯಾದ ಸೇವನೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳು ಹಾಗೂ ನುಗ್ಗೆ ಸೊಪ್ಪಿನ ಗುಣಮಟ್ಟವನ್ನು ಕಾಪಾಡಲು ಅನುಸರಿಸಬೇಕಾದ ವೈಜ್ಞಾನಿಕ ಸಂಸ್ಕರಣಾ ವಿಧಾನಗಳು, ಸಂರಕ್ಷಣೆ, ಲೇಬಲಿಂಗ್ ಮತ್ತು ಶೇಖರಣಾ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಪ್ರಾಯೋಗಿಕ ತರಬೇತಿಯಲ್ಲಿ ನುಗ್ಗೆ ಸೊಪ್ಪಿನ ಪುಡಿ, ಸೂಪ್ ಮಿಶ್ರಣ, ಚಟ್ನಿ ಪುಡಿ, ರಸಂ ಪುಡಿ, ಲಡ್ಡು, ಪೌಷ್ಟಿಕ ಬಾರ್ ಹಾಗೂ ನುಗ್ಗೆ ಸೊಪ್ಪಿನ ಚಹಾ ಸೇರಿದಂತೆ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ವಿಧಾನಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಲಾಯಿತು.

ಸ್ಥಳೀಯವಾಗಿ ಲಭ್ಯವಿರುವ ನುಗ್ಗೆ ಸೊಪ್ಪನ್ನು ಪೌಷ್ಟಿಕ ಹಾಗೂ ಮಾರುಕಟ್ಟೆ ಮೌಲ್ಯ ಹೊಂದಿರುವ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಮೂಲಕ ಗೃಹಮಟ್ಟದ ಆಹಾರ ಸಂಸ್ಕರಣೆ, ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಗೆ ಇರುವ ಅವಕಾಶಗಳ ಕುರಿತು ಈ ತರಬೇತಿ ಬೆಳಕು ಚೆಲ್ಲಿತು.

ಸುಮಾರು 25 ಮಂದಿ ಭಾಗವಹಿಸಿದ ಈ ತರಬೇತಿ ಕಾರ್ಯಕ್ರಮವು ನುಗ್ಗೆ ಸೊಪ್ಪಿನ ಪೌಷ್ಟಿಕ, ಆರೋಗ್ಯ ಮತ್ತು ವಾಣಿಜ್ಯಿಕ ಮಹತ್ವದ ಕುರಿತು ಅರಿವು ಮೂಡಿಸುವುದರ ಜೊತೆಗೆ, ಅದರ ಮೌಲ್ಯವರ್ಧನೆಯ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!