ತಿರುವನಂತಪುರಂ: ಬಿಜೆಪಿ ನಾಯಕಿ ಪದ್ಮಜಾ ವೇಣುಗೋಪಾಲ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿದ್ದು ಯಾವುದೇ ಪೂರ್ವಯೋಜನೆಯಿಲ್ಲದೆ ತೆಗೆದುಕೊಂಡ ನಿರ್ಧಾರವಾಗಿತ್ತು. ಆ ನಿರ್ಧಾರ ತಪ್ಪಾಗಿತ್ತು ಎಂದು ಪದ್ಮಜಾ ಪ್ರತಿಕ್ರಿಯಿಸಿದ್ದಾರೆ. ಅವರು ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.ಪದ್ಮಜಾ ಅವರ ಜೊತೆಗೆ ಯುವಮೋರ್ಚಾ ತ್ರಿಶೂರ್ ಜಿಲ್ಲಾ ಅಧ್ಯಕ್ಷ ಮನು ಪಳ್ಳತ್ತ್ ಕೂಡ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಪಕ್ಷದ ನಾಯಕತ್ವದಲ್ಲಿರುವ ಯಾರೂ ತನ್ನ ಅಹವಾಲುಗಳನ್ನು ಆಲಿಸಲು ಕೂಡ ಸಿದ್ಧರಿಲ್ಲ ಎಂಬುದು ಪದ್ಮಜಾ ಅವರ ಪ್ರಮುಖ ಆರೋಪವಾಗಿದೆ.ಮೊದಲು ಮುಕುಂದಪುರಂ ಲೋಕಸಭಾ ಕ್ಷೇತ್ರದಲ್ಲಿ ಹಾಗೂ ಬಳಿಕ ತ್ರಿಶೂರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಪದ್ಮಜಾ, ತ್ರಿಶೂರ್ ಡಿಸಿಸಿ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರ ನಾಯಕತ್ವದ ಸೂಚನೆಯ ಮೇರೆಗೆ ಪದ್ಮಜಾ ಅವರನ್ನು ತ್ರಿಶೂರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಗೆಲುವಿನ ನಿರೀಕ್ಷೆಯಿದ್ದ ಕ್ಷೇತ್ರದಲ್ಲಿ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಈ ಸೋಲಿನ ಬಳಿಕ ಬಿಜೆಪಿ ನಾಯಕತ್ವದ ಒಂದು ವರ್ಗದೊಂದಿಗೆ ಅವರ ಅಂತರ ಮತ್ತಷ್ಟು ಹೆಚ್ಚಾಯಿತು ಎನ್ನಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ಸೋಲಾದರೆ ಸಾಂವಿಧಾನಿಕ ಹುದ್ದೆ ಸೇರಿದಂತೆ ಹಲವು ಸ್ಥಾನಮಾನಗಳನ್ನು ನೀಡುವ ಭರವಸೆ ನೀಡಲಾಗಿತ್ತು ಎಂದು ಪದ್ಮಜಾ ಅವರಿಗೆ ಆಪ್ತರಾಗಿರುವವರು ಹೇಳುತ್ತಾರೆ. ಆದರೆ, ಚುನಾವಣೆಯ ಸೋಲಿನ ಬಳಿಕ ಪಕ್ಷದ ನಾಯಕತ್ವ ಸಂಪೂರ್ಣವಾಗಿ ತಮ್ಮನ್ನು ಕಡೆಗಣಿಸಿದೆ ಎಂಬುದು ಅವರ ಅಳಲಾಗಿದೆ.

ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ಕಾರ್ಯಕ್ರಮಗಳಲ್ಲೂ ಪದ್ಮಜಾ ಅವರು ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇದೇ ಸಂದರ್ಭದಲ್ಲಿ ತ್ರಿಶೂರ್‌ನ ಬಿಜೆಪಿ ನಾಯಕಿ ನಿವೇದಿತಾ ಸುಬ್ರಹ್ಮಣ್ಯನ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕ ಮಾಡಲಾಗಿತ್ತು. ಇದರಿಂದ ಬಿಜೆಪಿಯಲ್ಲಿ ತಮ್ಮ ಪಾತ್ರ ಮುಗಿದಿದೆ ಎಂಬ ನಿರ್ಧಾರಕ್ಕೆ ಪದ್ಮಜಾ ಬಂದಿದ್ದಾರೆ ಎನ್ನಲಾಗಿದೆ.ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಸುರೇಶ್ ಗೋಪಿ, ಪದ್ಮಜಾ ಅವರ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

