
ಬೆಂಗಳೂರಿನಲ್ಲಿ ಅನಿರ್ದಿಷ್ಟವಧಿ ಧರಣಿ ಮಾಡ್ತಿರೋ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಸಂಬಂಧಿಸಿದಂತೆ ಮಂಗಳೂರಲ್ಲಿ ಸಚಿವ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದು ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಮೊದಲು ಪ್ರೋತ್ಸಾಹ ಧನ ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ. ಈ ಕುರಿತು ಬಿಜೆಪಿ ನಾಯಕರು ಆರೋಪ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪತ್ರ ಬರೆಯಲಿ ಎಂದ ಅವರು ಬಿಜೆಪಿ ಸರ್ಕಾರ ಇದ್ದಾಗ ರೈತರ ಮೇಲೆ ಗೋಲಿಬಾರ್ ಆಗಿತ್ತಲ್ವಾ ಎಂದು ಪ್ರಶ್ನಿಸಿದರು.

ಇನ್ನು ಬಿಸ್ಲೇರಿ ಬ್ರಾಂಡ್ ನೀರಿನ ಫ್ಯಾಕ್ಟರಿ ಮೇಲೆ ದೆಹಲಿಯಲ್ಲಿ ದಾಳಿ ಆಗಿದೆ. ರಾಜ್ಯದಲ್ಲಿ ಅದರ ಸ್ಥಿತಿಗತಿ ಏನು ಅಂತ ನಮ್ಮ ಅಧಿಕಾರಿಗಳ ಬಳಿ ಕೇಳುತ್ತೇನೆ. ರಾಜ್ಯದಲ್ಲಿ ಅನೈರ್ಮಲ್ಯ ಕಂಡುಬಂದರೆ ನಾವು ಬಿಡೋದಿಲ್ಲ. ಹೊರ ರಾಜ್ಯದಿಂದ ಬಂದ ನೀರನ್ನು ನಾವು ರಾಜ್ಯದಲ್ಲಿ ತಪಾಸಣೆಗೆ ಒಳಪಡಿಸುತ್ತೇವೆ ಎಂದು ಹೇಳಿದರು. ಮಿನರಲ್ ವಾಟರ್ ಬಳಕೆಯಿಂದ ಕ್ಯಾನ್ಸರ್ ಕಾರಕ ಎಂಬ ವದಂತಿ ಕುರಿತ ಪತ್ರಕರ್ತರ ಪ್ರಶ್ನೆಗೆ ಖಾದರ್ ಉತ್ತರಿಸಿದರು.

ಜನೌಷಧಿ ಕೇಂದ್ರಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವ ವಿಚಾರದಲ್ಲಿ ಖಾದರ್ ಸಮರ್ಥನೆ ಮಾಡಿಕೊಂಡು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಮಿನರಲ್ ವಾಟರ್ ಕಂಪೆನಿಗಳ ಮೇಲೂ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 112 ನೀರಿನ ಫ್ಯಾಕ್ಟರಿಯನ್ನು ತಪಾಸಣೆ ನಡೆಸುತ್ತೇವೆ. ನೀರಿನ ಫ್ಯಾಕ್ಟರಿಗಳ ಗುಣಮಟ್ಟ ಮತ್ತು ಕಾರ್ಯ ನಿರ್ವಹಣೆ ಪರಿಶೀಲನೆ ಮಾಡಿದ್ದೇವೆ. ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅದರಲ್ಲಿ 60 ಸ್ಯಾಂಪಲ್ ತಪಾಸಣೆ ಕಳಿಸಿದ್ದೇವೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಯು.ಟಿ. ಖಾದರ್ ತಿಳಿಸಿದರು.


