ಮಂಜೇಶ್ವರದಲ್ಲಿ ಎಂಡಿಎಂಎ, ಗಾಂಜಾ ಸಹಿತ ವ್ಯಕ್ತಿ ಬಂಧನ: ಬುಲೆಟ್ ಬೈಕ್ ವಶಕ್ಕೆ

ಮಂಜೇಶ್ವರ: ಅಬಕಾರಿ ಇಲಾಖೆಯ ಜಂಟಿ ವಾಹನ ತಪಾಸಣೆ ವೇಳೆ ಎಂಡಿಎಂಎ ಹಾಗೂ ಗಾಂಜಾ ಸಹಿತ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.ಬಂಧಿತನನ್ನು ಮಂಗಲ್ಪಾಡಿ ಗ್ರಾಮದ ಪತ್ತೋಡಿ ನಿವಾಸಿ ಅಬ್ದುಲ್ ರೌಫ್ (41) ಎಂದು ಗುರುತಿಸಲಾಗಿದೆ. ಆತನಿಂದ 3.306 ಗ್ರಾಂ ಎಂಡಿಎಂಎ ಹಾಗೂ 1.129 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಮುಂಭಾಗದಲ್ಲಿ ಅಬಕಾರಿ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಕುಂಬಳೆ ರೇಂಜ್ ಅಬಕಾರಿ ತಂಡ ಹಾಗೂ ಕೆ.ಇ.ಎಂ.ಯು. ತಂಡ ಜಂಟಿಯಾಗಿ ವಾಹನ ತಪಾಸಣೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳು ನಿಲ್ಲಿಸುವಂತೆ ಸೂಚನೆ ನೀಡಿದರೂ ನಿಲ್ಲಿಸದೆ ಮುಂದುವರಿದ ಬುಲೆಟ್ ಬೈಕ್ ಅನ್ನು ಬೆನ್ನಟ್ಟಿದ್ದಾರೆ.

ಬಳಿಕ ಉಪ್ಪಳ ರೈಲ್ವೆ ನಿಲ್ದಾಣ ರಸ್ತೆಯ ಸಮೀಪದ ಮೈದಾನದಲ್ಲಿ ಬೈಕ್ ಅನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ, ಅದರಲ್ಲಿದ್ದ ಪೌಚ್‌ನಲ್ಲಿ ಮಾದಕವಸ್ತು ಪತ್ತೆಯಾಗಿದೆ.

ನಂತರ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಅವರ ಸಮ್ಮುಖದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಜಿ. ಕೃಷ್ಣಕುಮಾರ್ ನಡೆಸಿದ ದೇಹ ತಪಾಸಣೆ ವೇಳೆ 5,700 ರೂಪಾಯಿ ನಗದು, ಒಂದು ಐಫೋನ್ ಹಾಗೂ ಗಾಜಿನ ಪೈಪ್ ಪತ್ತೆಯಾಗಿದೆ.

ಮಾದಕವಸ್ತು ಸಾಗಾಟಕ್ಕೆ ಬಳಸಿದ್ದ ಕೆಎಲ್ 14 ಜಿ 6832 ನೋಂದಣಿ ಸಂಖ್ಯೆಯ ಬುಲೆಟ್ ಬೈಕ್ ಅನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!