ಮುಂಬೈ ಭಯೋತ್ಪಾದಕ ದಾಳಿಗೆ 18 ವರ್ಷ: 166 ಜನರ ಬಲಿ ಪಡೆದ ಕರಾಳ ದಿನದ ನೆನಪು

ಮುಂಬೈ: ದೇಶವನ್ನೇ ಬೆಚ್ಚಿಬೀಳಿಸಿದ್ದ ಮುಂಬೈ ಭಯೋತ್ಪಾದಕ ದಾಳಿ ನಡೆದು ಇಂದಿಗೆ 18 ವರ್ಷ. 2008ರ ನವೆಂಬರ್ 26ರಂದು ದೇಶ ಕಂಡ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾದ ಈ ದಾಳಿಯಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದರು. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ಮುಂಬೈ ಕರಾವಳಿಗೆ ಬಂದಿಳಿದ ಲಷ್ಕರ್-ಎ-ತೊಯ್ಬಾ ಸಂಘಟನೆಯ 10 ಉಗ್ರರು ವಿವಿಧ ತಂಡಗಳಾಗಿ ವಿಭಜನೆಗೊಂಡು ನಗರದ ಹಲವು ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಗುಂಡಿನ ಸದ್ದು, ಸ್ಫೋಟಗಳು ಹಾಗೂ ಜನರ ಆಕ್ರಂದನದಿಂದ ಇಡೀ ಮುಂಬೈ ನಗರ ಭಯಭೀತವಾಗಿತ್ತು. ನಗರವೇ ಅಕ್ಷರಶಃ ಸ್ಮಶಾನಸದೃಶವಾಗಿತ್ತು.

ದಕ್ಷಿಣ ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಸಮೀಪದ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ನರಿಮನ್ ಪಾಯಿಂಟ್‌ನ ಒಬೆರಾಯ್ ಟ್ರೈಡೆಂಟ್ ಹೋಟೆಲ್, ನರಿಮನ್ ಹೌಸ್ ಹಾಗೂ ಲಿಯೋಪೋಲ್ಡ್ ಕೆಫೆ ಸೇರಿದಂತೆ ಹಲವು ಸ್ಥಳಗಳನ್ನು ಉಗ್ರರು ಗುರಿಯಾಗಿಸಿಕೊಂಡಿದ್ದರು. ವಿದೇಶಿಗರು ಸೇರಿದಂತೆ ಒಟ್ಟು 166 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದರು.

ಸತತ ಮೂರು ದಿನಗಳ ಕಾಲ ದೇಶ ಆತಂಕದಲ್ಲಿ ಮುಳುಗಿತ್ತು. ನವೆಂಬರ್ 29ರ ಬೆಳಿಗ್ಗೆ ಸುಮಾರು 8 ಗಂಟೆಗೆ ಭದ್ರತಾ ಪಡೆಗಳ ಕಾರ್ಯಾಚರಣೆ ಅಂತ್ಯಗೊಂಡಿತ್ತು. ಈ ವೇಳೆ 9 ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದವು. ಮುಂಬೈ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಹಾಗೂ ಕನ್ನಡಿಗರಿಗೂ ಚಿರಪರಿಚಿತರಾದ ಮಲಯಾಳಿ ಎನ್‌ಎಸ್‌ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಹಲವು ಭದ್ರತಾ ಸಿಬ್ಬಂದಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು.ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು 2012ರ ನವೆಂಬರ್ 21ರಂದು ಗಲ್ಲಿಗೇರಿಸಲಾಯಿತು.

ಮುಂಬೈ ಭಯೋತ್ಪಾದಕ ದಾಳಿ ಭಯೋತ್ಪಾದನೆಯ ವಿರುದ್ಧ ಹೋರಾಡುವ ಭಾರತದ ಬದ್ಧತೆಯನ್ನು ಜಗತ್ತಿಗೆ ಸಾರಿದ ಮಹತ್ವದ ಘಟನೆಯಾಗಿತ್ತು. ಮುಂಬೈ ದಾಳಿಯ ಬಳಿಕವೂ ಭಾರತ ಹಲವು ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಯಿತು. 2016ರಲ್ಲಿ ಪಠಾಣ್‌ಕೋಟ್ ವಾಯುನೆಲೆ ಹಾಗೂ ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆದರೆ, 2019ರಲ್ಲಿ ಪುಲ್ವಾಮಾದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆಯಿತು. 2025ರಲ್ಲಿ ಪಹಲ್ಗಾಮ್‌ನಲ್ಲಿಯೂ ಉಗ್ರರು ದಾಳಿ ನಡೆಸಿದ್ದರು.

ಆಪರೇಷನ್ ಸಿಂಧೂರ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದರೂ, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಿಂದ ದೇಶಕ್ಕೆ ಇನ್ನೂ ಬೆದರಿಕೆ ಮುಂದುವರಿದಿದೆ. 18 ವರ್ಷಗಳ ಹಿಂದಿನ ಆ ಕರಾಳ ದಿನದ ನೆನಪು ಇಂದಿಗೂ ದೇಶದ ಜನರ ಮನಸ್ಸಿನಲ್ಲಿ ಮಾಸಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!