ರಾಹುಲ್ ಗಾಂಧಿ ಹೆಸರು, ಫೋಟೋ ಇರುವ ಪೋಸ್ಟ್‌ಗಳನ್ನು ಮೆಟಾ ಅಳಿಸುತ್ತಿದೆ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಯುವ ಕಾಂಗ್ರೆಸ್

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೆಸರು ಅಥವಾ ಫೋಟೋ ಹೊಂದಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಮೆಟಾ ಸಂಸ್ಥೆ ತೆಗೆದುಹಾಕುತ್ತಿದೆ ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕೆಲವು ನಿಬಂಧನೆಗಳನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ.

ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರಕಟಿಸಲಾಗುವ ಪೋಸ್ಟ್‌ಗಳನ್ನು ಮೆಟಾ ಸಂಸ್ಥೆ ಸ್ವಯಂಪ್ರೇರಿತವಾಗಿ ತೆಗೆದುಹಾಕುತ್ತಿದೆ ಎಂಬುದು ಯುವ ಕಾಂಗ್ರೆಸ್‌ನ ಆರೋಪವಾಗಿದೆ.

ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮನು ಜೈನ್ ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 29ರಿಂದ ನವೆಂಬರ್ 23ರ ಅವಧಿಯಲ್ಲಿ ಪಕ್ಷದ ಸದಸ್ಯರಿಗೆ ಬಂದಿದ್ದ ಹಲವು ನೋಟಿಸ್‌ಗಳನ್ನು ಅವರು ನ್ಯಾಯಾಲಯಕ್ಕೆ ದಾಖಲೆಗಳ ಸಹಿತ ಸಲ್ಲಿಸಿದ್ದಾರೆ.ಈ ನೋಟಿಸ್‌ಗಳಲ್ಲಿ ತಾವು ಹಂಚಿಕೊಂಡ ಪೋಸ್ಟ್‌ಗಳು ಭಾರತದಲ್ಲಿ ಲಭ್ಯವಿಲ್ಲ ಎಂದು ತಿಳಿಸಲಾಗಿತ್ತು. ಆದರೆ, ಆ ಪೋಸ್ಟ್‌ಗಳಲ್ಲಿ ಸಾಮಾನ್ಯ ರಾಜಕೀಯ ಹಾಗೂ ವೈಯಕ್ತಿಕ ವಿಷಯಗಳಷ್ಟೇ ಇದ್ದವು ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಮದುವೆಯ ಆಹ್ವಾನ ನೀಡಿರುವ ಪೋಸ್ಟ್‌ಗಳು, ಪಕ್ಷದ ಕಾರ್ಯಕರ್ತರು ಪರಸ್ಪರ ಹುಟ್ಟುಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿರುವ ಪೋಸ್ಟ್‌ಗಳು, ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪೋಸ್ಟ್‌ಗಳು, ರಾಹುಲ್ ಗಾಂಧಿ ಅವರೊಂದಿಗೆ ಕಾರ್ಯಕರ್ತರು ತೆಗೆಸಿಕೊಂಡಿರುವ ಫೋಟೋಗಳು ಹಾಗೂ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಅವರು ನೀಡಿದ ಉಪನ್ಯಾಸಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಕೂಡ ತೆಗೆದುಹಾಕಲಾದ ವಿಷಯಗಳಲ್ಲಿ ಸೇರಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಎಲ್ಲ ಪೋಸ್ಟ್‌ಗಳಲ್ಲಿ ಸಾಮಾನ್ಯವಾಗಿರುವ ಏಕೈಕ ಅಂಶವೆಂದರೆ ರಾಹುಲ್ ಗಾಂಧಿ ಅವರ ಹೆಸರು ಅಥವಾ ಫೋಟೋ ಇರುವುದು ಎಂದು ಯುವ ಕಾಂಗ್ರೆಸ್ ನ್ಯಾಯಾಲಯದ ಗಮನಕ್ಕೆ ತಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!