ಅಮೆರಿಕ: ಅಮೆರಿಕದಲ್ಲಿ ಇಂಗ್ಲೆಂಡ್ನ ಯುವ ಫುಟ್ಬಾಲ್ ಆಟಗಾರನೊಬ್ಬ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಭಾನುವಾರ ಸ್ಥಳೀಯ ಸಮಯ ಮುಂಜಾನೆ 3.39ರ ಸುಮಾರಿಗೆ ಮಿಸಿಸಿಪ್ಪಿ ರಾಜ್ಯದ ಜಾಕ್ಸನ್ನಲ್ಲಿರುವ ಗ್ರೀನ್ ಘೋಸ್ಟ್ ಟ್ಯಾಕೋಸ್ ರೆಸ್ಟೋರೆಂಟ್ನ ಹೊರಗೆ ಈ ಘಟನೆ ನಡೆದಿದೆ. 18 ವರ್ಷದ ಕ್ರಿಸ್ ಮಹಾತ್ಮಾ ಮೃತಪಟ್ಟ ಯುವ ಆಟಗಾರ.

ಡಾರ್ಕ್ ಹಾರ್ಸ್ ಪ್ರೆಸ್ ವರದಿಯ ಪ್ರಕಾರ, ಕ್ರಿಸ್ ಮಹಾತ್ಮಾ ಹಾಗೂ ಅವರ ತಂಡವಾದ ಕಾಪಿಯಾ-ಲಿಂಕನ್ ವೋಲ್ವ್ಸ್ನ ಇತರ ಆಟಗಾರರು ರೆಸ್ಟೋರೆಂಟ್ನ ಹೊರಗೆ ಮಾದಕ ವಸ್ತುಗಳ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಈ ವೇಳೆ ವ್ಯಕ್ತಿಯೊಬ್ಬ ಏಕಾಏಕಿ ಬಂದೂಕು ಹೊರತೆಗೆದು ಅಲ್ಲಿ ಗುಂಪಾಗಿ ನಿಂತಿದ್ದವರ ಮೇಲೆ ಗುಂಡು ಹಾರಿಸಿದ್ದಾನೆ. ಅಲ್ಲದೆ, ಕ್ರಿಸ್ ಮಹಾತ್ಮಾ ಅವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ ಎಂದು ವರದಿಯಾಗಿದೆ.

ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಕ್ರಿಸ್ ಅವರನ್ನು ತಕ್ಷಣವೇ ಖಾಸಗಿ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಡ್ಯಾನಿ ಲೂನಾ (22) ಎಂಬಾತನನ್ನು ಕ್ಯಾಪಿಟಲ್ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಸಂಘರ್ಷಕ್ಕೆ ಕಾರಣವೇನು ಎಂಬುದನ್ನು ಮಿಸಿಸಿಪ್ಪಿ ಸಾರ್ವಜನಿಕ ಸುರಕ್ಷತಾ ಇಲಾಖೆ ಇನ್ನೂ ಬಹಿರಂಗಪಡಿಸಿಲ್ಲ.

ಆರೋಪಿಯನ್ನು ಬಂಧಿಸಿರುವುದು ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆದರೆ, ಯುವ ಆಟಗಾರನನ್ನು ಹಾಗೂ ಪ್ರೀತಿಪಾತ್ರ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬದ ನೋವನ್ನು ಈ ಕ್ರಮದಿಂದ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸ್ ಮುಖ್ಯಸ್ಥ ಮಾರ್ಕ್ ಮಿಲ್ಲರ್ ತಿಳಿಸಿದ್ದಾರೆ.ಕ್ರಿಸ್ ಮಹಾತ್ಮಾ ಇತ್ತೀಚೆಗಷ್ಟೇ ಕಾಪಿಯಾ-ಲಿಂಕನ್ ಕಮ್ಯುನಿಟಿ ಕಾಲೇಜಿಗೆ ಪ್ರವೇಶ ಪಡೆದಿದ್ದರು. ಈ ಕಾಲೇಜಿನ ಫುಟ್ಬಾಲ್ ತಂಡವಾದ ಕಾಪಿಯಾ-ಲಿಂಕನ್ ವೋಲ್ವ್ಸ್ ಪರ ಆಡಲು ಆರಂಭಿಸಿ ಕೇವಲ ಮೂರು ತಿಂಗಳಾಗಿತ್ತು. ಕಾಲೇಜಿನಿಂದ ದಕ್ಷಿಣಕ್ಕೆ ಸುಮಾರು 45 ಮೈಲು (73 ಕಿ.ಮೀ.) ದೂರದಲ್ಲಿರುವ ಜಾಕ್ಸನ್ನಲ್ಲಿ ಗುಂಡಿನ ದಾಳಿ ನಡೆದಿತ್ತು.

ಕಳೆದ ಸೆಪ್ಟೆಂಬರ್ನಲ್ಲಿ ನ್ಯಾಷನಲ್ ಪಾರ್ಕ್ ಕಾಲೇಜು ವಿರುದ್ಧ ನಡೆದ ಪಂದ್ಯದಲ್ಲಿ ಕಾಪಿಯಾ-ಲಿಂಕನ್ ವೋಲ್ವ್ಸ್ ತಂಡ 3-2 ಗೋಲುಗಳ ಅಂತರದಲ್ಲಿ ಜಯಗಳಿಸಿತ್ತು. ಈ ಪಂದ್ಯದಲ್ಲಿ ಕ್ರಿಸ್ ಮಹಾತ್ಮಾ ಒಂದು ಗೋಲು ದಾಖಲಿಸಿದ್ದರು. ಕೇವಲ ಮೂರು ತಿಂಗಳ ಅವಧಿಯಲ್ಲಿ ಯುವ ಆಟಗಾರ 14 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದ ಕ್ರಿಸ್ ಅವರ ಅಕಾಲಿಕ ನಿಧನ ಕ್ರೀಡಾ ವಲಯದಲ್ಲಿ ಆಘಾತ ಮೂಡಿಸಿದೆ.

