ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಶರದ್ ಪವಾರ್ ಅವರನ್ನು ಗುರುವಾರ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಜಲೀಕರಣದ ಲಕ್ಷಣಗಳು ಕಂಡುಬಂದಿರುವ ಶಂಕೆಯ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪುತ್ರಿ, ಎನ್‌ಸಿಪಿ ನಾಯಕಿ ಹಾಗೂ ಸಂಸದೆ ಸುಪ್ರಿಯಾ ಸುಳೆ ತಿಳಿಸಿದ್ದಾರೆ.

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸುಪ್ರಿಯಾ ಸುಳೆ, “ನಾವು ಬಾಬಾ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ. ಅವರಿಗೆ ನಿರ್ಜಲೀಕರಣವಾಗಿರುವ ಸಾಧ್ಯತೆಯಿದೆ” ಎಂದು ತಿಳಿಸಿದ್ದಾರೆ.ಕೆಲಸದ ಸಮಯವನ್ನು ಕಡಿಮೆ ಮಾಡಿಕೊಳ್ಳುವಂತೆ ಹಾಗೂ ಪ್ರಯಾಣವನ್ನು ಮಿತಿಗೊಳಿಸುವಂತೆ ನಿರಂತರವಾಗಿ ಮನವಿ ಮಾಡುತ್ತಿದ್ದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸುಪ್ರಿಯಾ ಹೇಳಿದ್ದಾರೆ. ಬಾಬಾ ಅವರಿಗೆ ತಮ್ಮ ಕೆಲಸದ ಮೇಲೆ ಅಪಾರ ಪ್ರೀತಿ ಇದೆ ಎಂದೂ ಅವರು ತಿಳಿಸಿದ್ದಾರೆ.

ಶರದ್ ಪವಾರ್ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದವರಿಗೆ ಹಾಗೂ ಶುಭ ಹಾರೈಸಿದ ಎಲ್ಲರಿಗೂ ಸುಪ್ರಿಯಾ ಸುಳೆ ಧನ್ಯವಾದ ತಿಳಿಸಿದ್ದಾರೆ.ಈ ತಿಂಗಳೊಂದರಲ್ಲೇ ಶರದ್ ಪವಾರ್ ಅವರನ್ನು ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. 85 ವರ್ಷದ ಮಾಜಿ ಕೇಂದ್ರ ಸಚಿವರನ್ನು ನವೆಂಬರ್ 2ರಂದು ಪುಣೆಯ ರೂಬಿ ಹಾಲ್ ಕ್ಲಿನಿಕ್‌ಗೆ ದಾಖಲಿಸಲಾಗಿತ್ತು. ನವೆಂಬರ್ 4ರಂದು ಅಲ್ಲಿಂದ ಬಿಡುಗಡೆ ಮಾಡಲಾಗಿತ್ತು.

ಅದೇ ದಿನ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿದ್ದು, ನವೆಂಬರ್ 7ರವರೆಗೆ ಚಿಕಿತ್ಸೆ ನೀಡಲಾಗಿತ್ತು.

ಆದರೆ, ಈ ಬಾರಿ ಆಸ್ಪತ್ರೆಗೆ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವೈದ್ಯಕೀಯ ಮಾಹಿತಿಯನ್ನು ಕುಟುಂಬದವರು ಅಥವಾ ಆಸ್ಪತ್ರೆಯ ಆಡಳಿತ ಮಂಡಳಿ ಈವರೆಗೆ ಬಹಿರಂಗಪಡಿಸಿಲ್ಲ.

