ಬ್ರಹ್ಮರಕೂಟ್ಲು ಲೂಟಿ ಕೇಂದ್ರ ಬಂದ್ ಮಾಡದೆ ವಳಾಲು ನಲ್ಲಿ ಟೋಲ್ ಲೂಟಿ ಕೇಂದ್ರ ಆರಂಭಿಸಿರುವುದು ಖಂಡನೀಯ: ಅನ್ವರ್ ಸಾದತ್ ಬಜತ್ತೂರು

ಮಂಗಳೂರು: ಕಳೆದ 13 ವರ್ಷಗಳಿಂದ ಸಾರ್ವಜನಿಕರ ಹಣವನ್ನು ಅಕ್ರಮವಾಗಿ ಸುಲಿಗೆ ಮಾಡುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸದೆ, ಇದೀಗ ಏಕಾಏಕಿ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ನಲ್ಲಿ ನೂತನ ಟೋಲ್ ಪ್ಲಾಜಾವನ್ನು ಕಾರ್ಯಾರಂಭ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಜನವಿರೋಧಿ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ತೀವ್ರವಾಗಿ ಖಂಡಿಸಿದ್ದಾರೆ.

​ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ‘ಶೀಘ್ರದಲ್ಲೇ ಬಂದ್ ಮಾಡಲಾಗುವುದು, ಕೇವಲ ಅಧಿಕೃತ ಆದೇಶಕ್ಕಾಗಿ ಕಾಯಲಾಗುತ್ತಿದೆ’ ಎಂದು ಸಂಸದರು ಮತ್ತು ಅಧಿಕಾರಿಗಳು ಕೇವಲ ಭರವಸೆಗಳ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಒಂದೆಡೆ ಬ್ರಹ್ಮರಕೂಟ್ಲು ಟೋಲ್ ತೆರವಿನ ಅಧಿಕೃತ ಆದೇಶ ಇನ್ನೂ ಹೊರಬಿದ್ದಿಲ್ಲ, ಇನ್ನೊಂದೆಡೆ ಬಿ.ಸಿ. ರೋಡ್ – ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಳ್ಳುವ ಮುನ್ನವೇ ವಳಾಲು ನಲ್ಲಿ ಟೋಲ್ ಸಂಗ್ರಹ ಆರಂಭಿಸಿರುವುದು ಹಗಲು ದರೋಡೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


​”ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಈಗಾಗಲೇ ನೆಲಮಂಗಲದಿಂದ ಸಕಲೇಶಪುರದವರೆಗೆ 5 ಕಡೆ ಟೋಲ್ ಪ್ಲಾಜಾಗಳಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವಳಾಲು ನಲ್ಲಿ ಮತ್ತೊಂದು ಟೋಲ್ ಸೇರ್ಪಡೆಯಾಗುವುದರಿಂದ ಜಿಲ್ಲೆಯ ಜನತೆ, ವಾಹನ ಸವಾರರು ಹಾಗೂ ಸರಕು ಸಾಗಣೆದಾರರ ಮೇಲೆ ಭಾರಿ ಆರ್ಥಿಕ ಹೊರೆ ಬೀಳಲಿದೆ. ಸುರತ್ಕಲ್ ಟೋಲ್ ಗೇಟ್ ವಿರುದ್ಧ ನಡೆದ ಜನಾಂದೋಲನದ ಮಾದರಿಯಲ್ಲೇ, ಬ್ರಹ್ಮರಕೂಟ್ಲು ಟೋಲ್ ತಕ್ಷಣವೇ ಬಂದ್ ಆಗದಿದ್ದಲ್ಲಿ ಹಾಗೂ ವಳಾಲು ಟೋಲ್ ಮೂಲಕ ಜನರನ್ನು ಸುಲಿಗೆ ಮಾಡುವುದನ್ನು ನಿಲ್ಲಿಸದಿದ್ದಲ್ಲಿ, SDPI ವತಿಯಿಂದ ಸಾರ್ವಜನಿಕರನ್ನು ಒಗ್ಗೂಡಿಸಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು” ಎಂದು ಅನ್ವರ್ ಸಾದತ್ ಬಜತ್ತೂರು ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!