ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ವರ್ಷದ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ: ಡಾ. ಎಂ.ಎನ್. ರಾಜೇಂದ್ರ ಕುಮಾರ್‌ಗೆ ಬೆಸ್ಟ್ ಚೇರ್‌ಮನ್ ಗೌರವ

ಮಂಗಳೂರು: ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) 2026ನೇ ಸಾಲಿನ ಪ್ರತಿಷ್ಠಿತ ‘ಐಕಾನಿಕ್ ಲೀಡರ್ಸ್’ ಪ್ರಶಸ್ತಿಗೆ ಆಯ್ಕೆಯಾಗಿದೆ. ಬ್ಯಾಂಕ್‌ಗೆ ವರ್ಷದ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ ಲಭಿಸಿದ್ದು, ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ‘ಬೆಸ್ಟ್ ಚೇರ್‌ಮನ್’ ಪ್ರಶಸ್ತಿ ಘೋಷಿಸಲಾಗಿದೆ.

ನವಿ ಮುಂಬಯಿಯ ‘ಇ ಪ್ಲಸ್ ಇಂಟೆಲೆಕ್ಚುವಲ್ ಮೀಡಿಯಾ’ ಸಂಸ್ಥೆಯ ವತಿಯಿಂದ ನವೆಂಬರ್ 27 ಮತ್ತು 28ರಂದು ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿರುವ 4ನೇ ಆವೃತ್ತಿಯ ರಾಷ್ಟ್ರೀಯ ಸಹಕಾರ ಬ್ಯಾಂಕ್‌ಗಳ ಕಾರ್ನಿವಲ್ ಹಾಗೂ ಐಕಾನಿಕ್ ಲೀಡರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸಾಧಿಸಿರುವ ಗಮನಾರ್ಹ ಪ್ರಗತಿ, ನಾವೀನ್ಯತೆ, ಸಾಂಸ್ಥಿಕ ಬೆಳವಣಿಗೆ, ಕಾರ್ಯಾಚರಣೆಯಲ್ಲಿನ ಶ್ರೇಷ್ಠತೆ ಹಾಗೂ ಜವಾಬ್ದಾರಿಯುತ ಬ್ಯಾಂಕಿಂಗ್ ಸೇವೆಯನ್ನು ಪರಿಗಣಿಸಿ ವರ್ಷದ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬ್ಯಾಂಕ್‌ಗೆ ಈ ಪ್ರತಿಷ್ಠಿತ ಗೌರವ ಪ್ರಥಮ ಬಾರಿಗೆ ಲಭಿಸಿರುವುದು ವಿಶೇಷವಾಗಿದೆ.

ಅದೇ ರೀತಿ, ಕಳೆದ 32 ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ದೂರದೃಷ್ಟಿಯ ನಾಯಕತ್ವ, ಸಹಕಾರ ಬ್ಯಾಂಕಿಂಗ್ ವ್ಯವಸ್ಥೆಯ ಬಲವರ್ಧನೆಗೆ ನೀಡಿದ ಕೊಡುಗೆ, ಸಾಧನೆ ಹಾಗೂ ಶ್ರೇಷ್ಠತೆಯ ಬದ್ಧತೆಯನ್ನು ಗುರುತಿಸಿ ‘ಬೆಸ್ಟ್ ಚೇರ್‌ಮನ್’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಮಟ್ಟದ ಈ ಸಮಾವೇಶದಲ್ಲಿ ದೇಶದ ವಿವಿಧ ನಗರ ಸಹಕಾರ ಬ್ಯಾಂಕ್‌ಗಳು, ರಾಜ್ಯ ಸಹಕಾರ ಬ್ಯಾಂಕ್‌ಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!