ಮಂಗಳೂರು ; ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಕರ್ನಾಟಕ ಇವರ ವತಿಯಿಂದ ನಿವೃತ್ತಿಯಾದ 20, 000ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕಾಯ್ದೆ 1972ರ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಗ್ರಾಚ್ಯುಟಿ ಹಣವನ್ನು ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಅನಿರ್ದಿಷ್ಟವಾವಧಿ ಮುಷ್ಕರವನ್ನು
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನವೆಂಬರ್ ೬ ರಂದು ನಡೆಸಲಾಗುವುದೆಂದು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಜಯಲಕ್ಷ್ಮಿ ಬಿ ಆರ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ 1975ರಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಜ್ಯುಟಿ ಕಾಯಿದೆ. 1972 ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಗ್ರಾಜ್ಯುಟಿ ನೀಡಬೇಕಿದೆ. ಉನ್ನತ ಮಟ್ಟದ ಅಧಿಕಾರಿಗಳು 2023-24ರಲ್ಲಿ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ / ಸಹಾಯಕಿಯರಿಗೆ ಹಣ ನೀಡಿ 1975ರಿಂದ ಕೆಲಸ ಮಾಡಿದ ಅಂಗನವಾಡಿ ಕಾರ್ಯಕರ್ತೆಯರಿಗೆ / ಸಹಾಯಕಿಯರಿಗೆ ಗ್ರಾಜ್ಯುಟಿ ವೇತನವನ್ನು ನೀಡಿಲ್ಲ ಎಂದರು .
ಕಳೆದ ಹಲವಾರು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು/ ಸಹಾಯಕಿಯರು ಗ್ರಾಜ್ಯುಟಿ ನೀಡುವ ಬಗ್ಗೆ ನಿರಂತರವಾಗಿ ನಡೆಸುತ್ತಿರುವ ಹೋರಾಟಗಳ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಗ್ರಾಚ್ಯುಟಿ ಕಾಯಿದೆ 1972 ರ ಹಾಗೂ ಕರ್ನಾಟಕ ಸರ್ಕಾರದ ಗ್ರಾಚ್ಯುಟಿ ನಿಯಮಾವಳಿ 1973 ರ ಪ್ರಕಾರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ/ ಸಹಾಯಕಿಯರಿಗೆ 25ನೇ ಎಪ್ರಿಲ್ 2022ರಂದು ಗ್ರಾಚ್ಯುಟಿ ನೀಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂದರು.
ಆದರೆ ಸರ್ಕಾರ 2011-12 ರಿಂದ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ / ಸಹಾಯಕಿಯರಿಗೆ ಗ್ರಾಚ್ಯುಟಿ ನೀಡದೇ 2023-24ನೇ ಸಾಲಿನ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ / ಸಹಾಯಕಿಯರಿಗೆ ಗ್ರಾಚ್ಯುಟಿ ನೀಡುತ್ತಿದ್ದಾರೆ. ಶೀಘ್ರವೇ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ 2011-12ರಿಂದ ಗ್ರಾಚ್ಯುಟಿ ಕೂಡಲೇ ನೀಡಬೇಕು ಮತ್ತು ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸರ್ಕಾರ ಕಡ್ಡಾಯವಾಗಿ ನಿವೃತ್ತಿ ವೇತನ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಉಷಾ , ಜಯಂತಿ , ಗೀತಾ ಹಳೆಯಂಗಡಿ ಉಪಸ್ಥಿತತರಿದ್ದರು .