ಉಡುಪಿ:ಪರ್ಯಾಯ ಪುತ್ತಿಗೆ ಮಠ ಮತ್ತು ಶ್ರೀಕೃಷ್ಣಮಠಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿ ಭರ್ಜರಿ ರೋಡ್ ಶೋ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದರು .ಆದಿ ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸಚಿವ ದಿನೇಶ್ ಗುಂಡೂರಾವ್ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಆದಿ ಉಡುಪಿಯಿಂದ ಪ್ರಧಾನಿ ಮೋದಿ ರೋಡ್ ಶೋ ಆರಂಭವಾಗಿದ್ದು, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ರೋಡ್ ಶೋ ನಡೆದಿದೆ. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿರುವ ಜನರು ಮೋದಿ ಮೋದಿ ಎಂದು ಜಯಘೋಷಗಳನ್ನು ಕೂಗಿ ಪ್ರಧಾನಿ ಮೇಲೆ ಹೂಮಳೆಗರೆದು ಸ್ವಾಗತಿಸಿದ್ದಾರೆ.
ತೆರೆದ ವಾಹನದಲ್ಲಿ ಜನರತ್ತ ಕೈಬೀಸಿ ಪ್ರಧಾನಿ ಮೋದಿ ಸಾಗಿದ್ದಾರೆ. ರೋಡ್ ಶೋ ಮೂಲಕವಾಗಿ ಶ್ರೀಕೃಷ್ಣ ಮಠದ ರಥಬೀದಿಗೆ ಪ್ರಧಾನಿ ಮೋದಿ ಆಗಮಿಸಿದರು .
ಉಡುಪಿಯ ಕೃಷ್ಣ ಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಷ್ಟಮಠದ ಪ್ರಮುಖರು ಸ್ವಾಗತಿಸಿದ್ದು, ಬಳಿಕ ಸ್ವರ್ಣಲೇಪಿತ ಕನಕನ ಕಿಂಡಿ ಉದ್ಘಾಟಿಸಿದ್ದಾರೆ. ಬಳಿಕ ನವಗ್ರಹ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು .
ನಂತರ ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀ ಪಾದರ ನೇತೃತ್ವದಲ್ಲಿ ನಡೆದ ವಿಶ್ವ ಗೀತಾ ಪರ್ಯಾಯ-ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಸಿದರು.
ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪ್ರಧಾನಿ ಮೋದಿ ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಣ ಮಾಡಿ, ಭಾಷಣದಲ್ಲಿ ಆತ್ಮತತ್ವದ ಬಗ್ಗೆ ವಿವರಿಸಿದರು. ಪರಮಾತ್ಮನ ಸ್ವರೂಪ, ಮೋಕ್ಷದ ಬಗ್ಗೆ, ಸೂಚ್ಯವಾಗಿ ವಿವರಿಸಿದರಲ್ಲದೆ, ತನ್ನ ಭಾಷಣದುದ್ದಕ್ಕೂ ಭಗವದ್ಗೀತೆಯ ಸಂದೇಶವನ್ನು ಸಾರುತ್ತಾ, ಪ್ರಸ್ತುತ ಕಾಲಘಟ್ಟದಲ್ಲಿ ಅದರ ಪ್ರಸ್ತುತತೆಯ ಬಗ್ಗೆ, ವಿವರಿಸುತ್ತಾ ಸಾಗಿದರು. ತನ್ನ ಭಾಷಣದ ಕೊನೆಯಲ್ಲಿ ಶ್ರೀಕೃಷ್ಣನು ಗೀತೆಯ ಸಂದೇಶವನ್ನು ಯುದ್ಧಭೂಮಿಯಲ್ಲಿ ನೀಡಿದ ಎಂದು ನೆನಪಿಸಿ ವೈರಿ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು.
ಭಗವದ್ಗೀತೆ ನಮಗೆ ಶಾಂತಿ ಹಾಗೂ ಸತ್ಯ(ಧರ್ಮ)ದ ಸ್ನಾಪನೆಯ ಬಗ್ಗೆ ವಿವರಿಸುವುದಲ್ಲದೆ, ಅತ್ಯಾಚಾರಿಗಳ ಅಂತ್ಯ ಅವಶ್ಯಕ ಎಂದು ಶ್ರೀಕೃಷ್ಣನು ಸಾರಿದ್ದಾನೆ . ವಸುಧೈವ ಕುಟುಂಬಕಂ ಅನ್ನೂ ಪಾಲಿಸುಸುವ ನಾವು ರಾಷ್ಟ್ರ ರಕ್ಷಣೆಗಾಗಿ ನಾವು ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಮಂತ್ರವನ್ನೂ ಕಲಿತಿದ್ದೇವೆ ಎಂದು ಮೋದಿ ತಿಳಿಸಿದರು.
ಭಗವಾನ್ ಶ್ರೀಕೃಷ್ಣನ ದರ್ಶನ ಪಡೆದಿರುವುದು ನನ್ನ ಜೀವನದ ಮಹಾಪುಣ್ಯ ಮೂರು ದಿನಗಳ ಹಿಂದೆ ಕುರುಕ್ಷೇತ್ರದಲ್ಲಿ ಇದ್ದ, ಇಂದು ಶ್ರೀಕೃಷ್ಣನ ದಿವ್ಯ ದರ್ಶನವಾಗಿದೆ. ಗುರುಸಂತರ ಉಪಸ್ಥಿತಿಯಲ್ಲಿ ಮಾತನಾಡುವ ಅವಕಾಶ ನನಗೆ ಸೌಭಾಗ್ಯ ಸಿಕ್ಕಿತು. ಜನ್ಮಭೂಮಿ ಗುಜರಾತ್ ಹಾಗೂ ಉಡುಪಿ ನಡುವೆ ಅನಾದಿ ಕಾಲದ ಸಂಬಂಧವಿದೆ. ಕೃಷ್ಣ ಆರಾಧನೆಯಷ್ಟೇ ಮಾತಾ ರುಕ್ಷ್ಮಿಣಿ ಆರಾಧನೆಯಲ್ಲಿ ಕೂಡ ನಮ್ಮ ನಂಟು ಗಾಢ, ಎಂದಿದ್ದಾರೆ.
ಉಡುಪಿ ಜನಸಂಘ-ಬಿಜೆಪಿಯ ಮಾದರಿ ದೇಶದಲ್ಲಿ ವಿಶಿಷ್ಟವಾಗಿದೆ. ಐದು ದಶಕಗಳ ಹಿಂದೆ ನಡೆದ ಅಭಿಯಾನದಲ್ಲಿ ಜನಸಂಘದ ವಿ.ಎಸ್. ಆಚಾರ್ಯರು ಗೆದ್ದಿದ್ದರು. ಇಂದೂ ಆ ಪರಂಪರೆ ಉಡುಪಿಯಲ್ಲಿ ಜೀವಂತವಾಗಿದೆ ಅವರ ಕೊಡುಗೆ ಅಪಾರ ಎಂದು ಡಾ. ವಿ.ಎಸ್. ಆಚಾರ್ಯರನ್ನು ಪ್ರಧಾನಿ ನನಪಿಸಿಕೊಂಡರು.
ಅಯೋಧ್ಯೆಯಿಂದ ಉಡುಪಿಯವರೆಗಿನ ರಾಮಭಕ್ತರು ಈ ನಾಡಿನ ವೈಶಿಷ್ಟ್ಯ ಉಡುಪಿ ಮಠ ವರ್ಷಗಳಿಂದ ಸಾವಿರಾರು ಜನರಿಗೆ ಆಶ್ರಯ, ಶಿಕ್ಷಣ, ಸಂಸ್ಕಾರ ನೀಡಿದೆ. ಸಮಾಜ ನಿರ್ಮಾಣದಲ್ಲಿ ಮಠದ ಪಾತ್ರ ಅಸಾಧಾರಣ ಪುರಂದರ ದಾಸ, ಕನಕದಾಸರು ಸರಳ ಭಾಷೆಯಲ್ಲಿ ಧಾರ್ಮಿಕ ತತ್ತ್ವ ಸಾರಿದರು. ಇಂದಿನ ಯುವಕರಲ್ಲೂ ಅದೇ ಜಾಗೃತಿ ಕಾಣುತ್ತಿದೆ. ನಾನು ಇಂದು ಸಣ್ಣ ಕಿಟಕಿಯಿಂದ ಶ್ರೀ ಕೃಷ್ಣನ ದರ್ಶನ ಮಾಡಿದರೆ ಅದು ಕನಕನ ಭಕ್ತಿಯ ಜೋಡಣೆಯನ್ನು ನೆನಪಿಸುತ್ತದೆ ಎಂದರು.
ಉಡುಪಿಯ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ವಿವರಿಸುತ್ತಾ ಅವರು, ಈ ಹಿಂದೆ ಸಮುದ್ರಾಳದಲ್ಲಿ ನೋಡಿದ ದೃಶ್ಯವು ಇಂದು ಇಲ್ಲಿ ಮತ್ತೆ ಕಾಣಿಸುತ್ತಿದೆ. ರಾಮಚರಿತಮಾನಸದಲ್ಲಿ ಕಲಿಯುಗದಲ್ಲಿ ಗೀತೆಯೇ ಪರಮ ಸಾಧನ ಎಂದು ಹೇಳಿದೆ. ಗೀತಾ ಪಠಣ ಶತಕ, ಮಂತ್ರೋಚ್ಚಾರಣೆ-ಇವೆಲ್ಲ ನಮ್ಮ ಆತ್ಮಬಲವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಸೋಲಾರ್ ಉದ್ಯಮ ನಾರಿಶಕ್ತಿ ಕ ಇವಲ ಯೋಜನೆಗಳಲ್ಲೂ ಶ್ರೀಕೃಷ್ಣನ ಪ್ರೇರಣೆ ಇದೆ. ಕೃಷ್ಣನ ಕರುಣೆಯ ಸಂದೇಶದೊಂದಿಗೆ, ರಾಷ್ಟ್ರ ರಕ್ಷಣೆಯ ಭಾಗವಾಗಿ ಮಿಶನ್ ಸುದರ್ಶನ್ ಚಕ್ರವನ್ನು ಉದ್ಯೋಷಿಸಿದವು. ಇಂದು ಇದು ನಮ್ಮ ದೇಶವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದರು.
ಭಗವದ್ಗೀತೆಯ ನ್ಯಾಯಬೋಧನೆಯ ಕುರಿತು ಮಾತನಾಡಿದ ಅವರು, ಶಾಂತಿ ಬೇಕನ್ನುವುದು ನಮಗೆ ಗೊತ್ತು. ಆದರೆ ಅತ್ಯಾಚಾರಿಗಳ ಅಂತ್ಯವಾಗಲೇಬೇಕು. ಅದೇ ಗೀತೆಯ ಸಂದೇಶ, ಎಂದು ಕಠಿಣ ನಿಲುವು ವ್ಯಕ್ತಪಡಿಸಿದರು. ಆಪರೇಶನ್ ಸಿಂಧೂರದ ಯಶಸ್ಸು ಭಾರತದ ಸಂಕಲ್ಪವನ್ನು ಜಗತ್ತಿಗೆ ತೋರಿಸಿದೆ ಎಂದರು. ಕೊನೆಗೆ, ವಿಕಸಿತ ಕರ್ನಾಟಕ-ವಿಕಸಿತ ಭಾರತ ಸಂಕಲ್ಪದೊಂದಿಗೆ ಮುಂದೆ ಸಾಗೋಣ. ಜೈ ಶ್ರೀಕೃಷ್ಣ ಎಂದು ಮೋದಿ ಹೇಳಿದರು .
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ ರಾಘವೇಂದ್ರ, ಮುಖಂಡ ರಾದ ಬಿ. ವೈ. ವಿಜಯೇಂದ್ರ, ರಾಜ್ಯ ಸಭಾ ಸಂಸದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶಾಸಕರಾದ ವಿ ಸುನಿಲ್ ಕುಮಾರ್, ಯಶ್ ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ ಕಿರಣ್ ಕುಮಾರ್ ಕೊಡ್ಲಿ ಹಾಗೂ ಗುರ್ಮೆ ಸುರೇಶ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.