ಕಾಫಿ ಕಳ್ಳತನದ ವೇಳೆ ತಡೆಯೊಡ್ಡಿದ್ದ ಮಾಲಿಕನ ಮೇಲೆ ಖದೀಮರಿಂದ ಮಾರಣಾಂತಿಕ ಹಲ್ಲೆ*

ಅರೇಹಳ್ಳಿ:ಮಲೆನಾಡು ಭಾಗವಾದ ಅರೇಹಳ್ಳಿ ಹಾಗೂ ಸುತ್ತಮುತ್ತಲಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಮಿತಿಮೀರಿದ ಕಾಡಾನೆಗಳ ಹಾವಳಿಯ ನಡುವೆಯೂ ಕೃಷಿಯನ್ನೇ ಅವಲಂಬಿಸಿ ಕಾಫಿ ಹಾಗೂ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾ ಆರ್ಥಿಕ ಸಂಕಷ್ಟದೊಂದಿಗೆ ಜೀವನ ಸಾಗಿಸುತ್ತಿರುವ ಅದೆಷ್ಟೋ ಮಧ್ಯಮ ವರ್ಗದ ಬೆಳೆಗಾರರಿಗೆ ಇದೀಗ ಕಾಫಿ ಬೆಳೆಗೆ ತುಸು ಬೆಲೆ ಏರಿಕೆ ಕಂಡಿದ್ದು ನಿರಾಳತೆಯ ಸಮಯದಲ್ಲಿಯೆ ಖದೀಮರ ಹಾವಳಿ ಮಿತಿ ಮೀರುತ್ತಿದ್ದು ಬೆಳೆಗಾರರಲ್ಲಿ ದಿನನಿತ್ಯ ಆತಂಕ ಸೃಷ್ಟಿಯಾಗುತ್ತಿದೆ. ರಾತ್ರಿ ಹಗಲೆನ್ನದೆ ಕಷ್ಟ ಪಟ್ಟು ಬೆಳೆಸಿದ ಕಾಫಿಯನ್ನು ಖದೀಮರು ದೋಚಿ ಪರಾರಿಯಾಗುತ್ತಿದ್ದು ಮಾತ್ರವಲ್ಲದೆ, ಅದನ್ನು ತಡೆಯಲು ಬಂದ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ.

ಕಾಫಿ ದೋಚಲು ಯತ್ನಿಸಿದ್ದ ಖದೀಮರನ್ನು ತಡೆಯಲು ಕಾರಿನಿಂದ ಹೊರಗೆ ಇಳಿದು ಬರುತ್ತಿದ್ದ ಕಾಫಿ ಬೆಳೆಗಾರನ ಮೇಲೆ ಖದೀಮರು ಮಾರಣಾಂತಿಕ ಹಲ್ಲೆ ನಡೆಸಿ 100 ಕೆಜಿ ಗಳಷ್ಟು ಕಾಫಿಯನ್ನು ದೋಚಿ ಪರಾರಿಯಾಗಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಎಂದು ಗುರುತಿಸಲಾಗಿದೆ.ಕಳೆದ ಕೆಲ ದಿನಗಳ ಹಿಂದೆ ಮಧ್ಯರಾತ್ರಿ ಸುಮಾರು 3ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಖದೀಮರ ಗುಂಪು ಸುಮಾರು 2 ಲಕ್ಷ ಮೌಲ್ಯದ ಕಾಫಿಯನ್ನು ಕಳುವು ಮಾಡಿದ್ದರು. ಈ ಬಗ್ಗೆ ಸ್ಥಳೀಯ ಕಾಫಿ ಬೆಳೆಗಾರ ಸಂಘದ ಸಹಕಾರದೊಂದಿಗೆ ಪೊಲೀಸ್ ಠಾಣೆಗೆ ಮಾಲೀಕರು ತೆರಳಿ ದೂರು ಸಲ್ಲಿಸಿ ತ್ವರಿತವಾಗಿ ಖದೀಮರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದರು.

ಇದಾದ ಬಳಿಕ ಮತ್ತೆ ಮುಂಜಾನೆ ಸುಮಾರು 4.30ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಅದೇ ಖದೀಮರ ಗುಂಪು ಪುನಃ ಕಾಫಿ ದೋಚಲು ಯತ್ನಿಸಿದ್ದು ಆ ವೇಳೆಗಾಗಲೇ ಎಚ್ಚೆತ್ತ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಎಂಬುವವರು ಕಾರಿನಿಂದ ಹೊರಗೆ ಇಳಿದು ಬರಲು ಯತ್ನಿಸಿದ್ದಾರೆ. ಆಗ ಅಲ್ಲಿದ್ದ ಗುಂಪು ಮಚ್ಚಿನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಸುಮಾರು 100 ಕೆಜಿ ಗಳಷ್ಟು ಕಾಫಿಯನ್ನು ದೋಚಿ ಜೊತೆಗೆ ಪ್ರಾಣಿ ಹಾವಳಿಯಿಂದ ಕೃಷಿಯನ್ನು ರಕ್ಷಿಸಲು ಬಳಸುತ್ತಿದ್ದ ಬಂದೂಕನ್ನು ದೋಚಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಜಗನ್ನಾಥ್ ಶೆಟ್ಟಿಯರನ್ನು ಹಾಸನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಈ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಫಿ ತೋಚುವ ಖದೀಮರ ಗ್ಯಾಂಗ್‌ ನ ಅಟ್ಟಹಾಸ ಮಿತಿಮೀರುತ್ತಿದ್ದರೂ, ಪೊಲೀಸ್ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸಿರೋದು ಇಲ್ಲಿನ ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೃಷಿಯನ್ನೇ ನಂಬಿ ಬದುಕುವ ಕಾಫಿ ಬೆಳೆಗಾರರಿಗೆ ಅತ್ತ ಕೃಷಿಯ ರಕ್ಷಣೆಯೂ ಇಲ್ಲ.. ಇತ್ತ ತಮ್ಮ ಜೀವದ ರಕ್ಷಣೆಯೂ ಇಲ್ಲದಂತಾಗಿದೆ. ಇಡೀ ರಾಜ್ಯದಲ್ಲೇ ಇದೊಂದು ಬೆಚ್ಚಿ ಬೀಳಿಸುವ ಪ್ರಕರಣವಾಗಿದ್ದರೂ ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ಗಂಭೀರ ಕ್ರಮಗಳನ್ನು ಕೈಗೆತ್ತಿಕೊಂಡಿಲ್ಲ.. ಹಾಗಾದ್ರೆ ಪೊಲೀಸ್‌ ಇಲಾಖೆ ಎನು ಮಾಡುತ್ತಿದೆ..? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!