ಮಂಜೇಶ್ವರ: ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾರ್ ವಾಚನಾಲಯದ ಮೇಲೆ ಪಟಾಕಿ ಸಿಡಿಸಿ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.
ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಈ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು ಬಳಿಕ ಪ್ಲೆಕ್ಸ್ ಬೋರ್ಡ್‌ಗಳನ್ನು ಹಾನಿಗೈಯುವುದರ ಜೊತೆಯಾಗಿ ವಾಚನಾಲಯದ ಮುಂಬಾಗದಲ್ಲಿ ನಿಂತಿದ್ದ ಹಸೈನಾರ್ ಕೋರಿತ್ತಳ (52) ಎಂಬವರಿಗೂ ಹಲ್ಲೆಗೈದಿರುವ ಬಗ್ಗೆ ದೂರಲಾಗಿದೆ. ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಸಿಪಿಎಂ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.