ಮಂಗಳೂರು: “ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು ವಿದ್ಯಾರ್ಥಿಗಳ ಸೊತ್ತಾಗಬೇಕು. ಆಧುನಿಕ ತಂತ್ರಜ್ಞಾನಗಳ ಪರಿಣಾಮಕಾರಿ ಪ್ರಭಾವದಿಂದ ಸನ್ನಡತೆಗೆ ವಿಮುಖರಾಗದೆ ಬದುಕಿನ ಮೌಲ್ಯಗಳಿಗೆ ಬೆಲೆ ನೀಡಬೇಕಾಗಿದೆ. ಅಂಕಗಳ ಜೊತೆಗೆ ಕೌಶಲಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವ ಮೂಲಕ ಬದುಕಿನ ಭದ್ರತೆಗೆ ಬುನಾದಿ ಹಾಕಬೇಕಾಗಿದೆ.” ಎಂದು ನಿವೃತ್ತ ಶಿಕ್ಷಣ ಅಧಿಕಾರಿ ಹಾಗೂ ಶಿಕ್ಷಣ ಚಿಂತಕರಾದ ಡಾ. ಕುಮಾರಸ್ವಾಮಿ ಎಚ್ ಇವರು ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ 48ನೇ ವಾರ್ಷಿಕೋತ್ಸವದ ಮುಖ್ಯ ಶೈಕ್ಷಣಿಕ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಎಲ್ಲಾ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಅಸ್ಮಾ ಹಸೈನಾರ್ ತಾಳಿತ್ತನೂಜಿ, ನಾವೆಲ್ಲ ಬಾಲ್ಯದ ಸಂಭ್ರಮಕ್ಕೊಂದು ಸುಂದರ ವೇದಿಕೆ ಕಲ್ಪಿಸಿಕೊಡುವುದು ಅತ್ಯವಶ್ಯ. ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಅವಕಾಶಗಳು ಸೃಷ್ಟಿಯಾದಷ್ಟು ಪ್ರತಿಭೆಗಳು ಹೊರ ಜಗತ್ತಿಗೆ ತೆರೆದಿಡುತ್ತದೆ. ಶಾಲಾ ಜೀವನದ ಸುಂದರ ಕ್ಷಣಗಳು ಮತ್ತೆ ಮತ್ತೆ ಮರುಕಳಿಸಲು ಇಂತಹ ವಾರ್ಷಿಕೋತ್ಸವ ಕಾರಣಗಳಾಗುತ್ತವೆ. ಎಂದರು.
ಈ ಸಭಾ ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿನಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಪಿ ಮಮತಾ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಗೌರವ ಸ್ವೀಕರಿಸಿದ ಡಾ. ಪಿ ಮಮತಾ ಶೆಟ್ಟಿ ತಮ್ಮ ಶಾಲಾ ಜೀವನದ ಅನುಭವಗಳನ್ನು ತೆರೆದಿಟ್ಟರು.
ಮುಖ್ಯ ಅತಿಥಿಗಳಾಗಿ ಕೊಳ್ಳಾಡು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಮಂಚಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ, ಪ್ರಗತಿಪರ ಕೃಷಿಕರಾದ ನಿಶ್ಚಲ್ ಜಿ ಶೆಟ್ಟಿ, ಯಕ್ಷಗಾನ ಗುರುಗಳಾದ ಅಶ್ವತ್ಥ್ ಮಂಜನಾಡಿ ವಾರ್ಷಿಕೋತ್ಸವದ ಕುರಿತಾಗಿ ತಮ್ಮ ಮಾತುಗಳನ್ನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಮಂಚಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಾಲೆ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಬೆಳೆಯಲು ಪೂರಕ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಶಾಲಾ ಶಿಕ್ಷಣದ ಜೊತೆ ಸಂಸ್ಕಾರದ ಮೌಲ್ಯಗಳನ್ನು ಬೋಧಿಸಲಾಗುತ್ತಿದ್ದು ಸುಂದರ ಸಮಾಜವನ್ನು ಸೃಷ್ಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಂದು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ ಪ್ರದರ್ಶನಗಳು ನಡೆದವು.
ಈ ಕಾರ್ಯಕ್ರಮದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸವಿತಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಮತಿ ಚಂದ್ರಾವತಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕಲಾ ಶಿಕ್ಷಕರಾದ ಜಗನ್ನಾಥ ಪಿ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲ ವಿಟ್ಲ ವರದಿ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಿತ ಶಿಕ್ಷಕಿ ಶ್ರೀಮತಿ ಸುನಂದ ಎಚ್ ಬಿ ವಂದಿಸಿದರು. ವಿಜ್ಞಾನ ಶಿಕ್ಷಕ ವಾಝಿ ಮೊಂತೇರೊ ಕಾರ್ಯಕ್ರಮ ನಿರ್ವಹಿಸಿದರು.