ಬೆಂಗಳೂರು : ಹೊಸ ವರ್ಷದ ಸಂಭ್ರಮದಲ್ಲಿರುವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಸರ್ಕಾರ, ಸಾರಿಗೆ ನೌಕರರು ಮುಂದಿನ ಆರು ತಿಂಗಳವರೆಗೆ ಯಾವುದೇ ರೀತಿಯ ಮುಷ್ಕರ ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. 2026ರ ಜನವರಿ 1 ರಿಂದ ಜೂನ್ ತಿಂಗಳವರೆಗೆ ಸಾರಿಗೆ ನೌಕರರು ಪ್ರತಿಭಟನೆ ಅಥವಾ ಮುಷ್ಕರ ನಡೆಸುವಂತಿಲ್ಲ.
ಸರ್ಕಾರದ ಈ ಆದೇಶವನ್ನು ಉಲ್ಲಂಘಿಸಿ ಮುಷ್ಕರಕ್ಕೆ ಮುಂದಾದಲ್ಲಿ, ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. 2025ರ ಡಿಸೆಂಬರ್ 31ಕ್ಕೆ ಈ ಹಿಂದಿನ ಮುಷ್ಕರ ನಿಷೇಧದ ಅವಧಿ ಮುಕ್ತಾಯಗೊಂಡಿತ್ತು. ಹೀಗಾಗಿ ತಕ್ಷಣವೇ ಜಾರಿಗೆ ಬರುವಂತೆ ಹೊಸ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸಾರಿಗೆ ಸಂಸ್ಥೆಯ ಎಲ್ಲಾ ಘಟಕಗಳಿಗೂ ಈ ಆದೇಶದ ಪ್ರತಿಯನ್ನು ರವಾನಿಸಲಾಗಿದ್ದು, ಪ್ರತಿಯೊಬ್ಬ ನೌಕರನ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಹಬ್ಬ ಮತ್ತು ರಜೆಗಳ ಸಾಲಿನಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.