ಬದಿಯಡ್ಕ: ಮಖಾಂಗೆ ತೆರಳಿ ಪ್ರಾರ್ಥನೆ ನಡೆಸಿದ ಹಿನ್ನೆಲೆಯಲ್ಲಿ ಪೆರ್ಲದಲ್ಲಿರುವ ಬಟ್ಟೆ ಅಂಗಡಿಗೆ ನುಗ್ಗಿ ಇಬ್ಬರು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ ₹65,000 ಕಳೆದುಹೋಗುವಂತೆ ಮಾಡಿದ ಆರೋಪದಲ್ಲಿ ಮೂವರ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಟ್ಟಂಪಾಡಿ ನಿವಾಸಿ ಕೆ.ಎಂ. ಮೊಹಮ್ಮದ್ ಅಶ್ರಫ್ (45) ಹಾಗೂ ಭುವನಚಂದ್ರನ್ (48) ಗಾಯಗೊಂಡವರಾಗಿದ್ದಾರೆ. ಈ ಕುರಿತು ಮೊಹಮ್ಮದ್ ಅಶ್ರಫ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಸಂಜೆ ಸುಮಾರು 5.30ರ ವೇಳೆಗೆ ಪೆರ್ಲದಲ್ಲಿ ಭುವನಚಂದ್ರನ್ ಹಾಗೂ ಅಶ್ರಫ್ ಮಾತನಾಡುತ್ತಿದ್ದ ವೇಳೆ ಆರೋಪಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಭುವನಚಂದ್ರನ್ ಮೇಲೆ ಹಲ್ಲೆ ನಡೆಯುವುದನ್ನು ತಡೆಯಲು ಯತ್ನಿಸಿದಾಗ ಅಶ್ರಫ್ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಇಬ್ಬರನ್ನೂ ಚೆಂಗಳ ಸಹಕಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಭುವನಚಂದ್ರನ್ ಹಾಗೂ ಅಶ್ರಫ್ ಇಬ್ಬರೂ ಪೆರ್ಲದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದು, ಭುವನಚಂದ್ರನ್ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಕುಟುಂಬದಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳ ಬಗ್ಗೆ ಹೇಳಿಕೊಂಡಾಗ, ಬಂತಡ್ಕ ಸಮೀಪದ ಮಖಾಂಗೆ ತೆರಳಿ ಪ್ರಾರ್ಥನೆ ನಡೆಸಿದರೆ ಸಮಸ್ಯೆಗಳು ನಿವಾರಣೆಯಾಗಬಹುದು ಎಂದು ಭುವನಚಂದ್ರನ್ ಸಲಹೆ ನೀಡಿದ್ದರೆಂದು ತಿಳಿದುಬಂದಿದೆ. ಬಳಿಕ ಆ ಮಹಿಳೆ ಮಖಾಂಗೆ ತೆರಳಿ ಪ್ರಾರ್ಥನೆ ನಡೆಸಿದ್ದು, ಇದೇ ವಿಚಾರ ಆರೋಪಿಗಳನ್ನು ಪ್ರಚೋದನೆಗೊಳಿಸಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ಅಂಗಡಿಗೆ ಬಂದು ಕೊಲೆ ಬೆದರಿಕೆ ಹಾಕಿ, ಕಬ್ಬಿಣದ ರಾಡ್ನಂತಹ ಮಾರಕಾಯುಧ ಬಳಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯ ವೇಳೆ ಅಶ್ರಫ್ ಅವರ ಬಳಿ ಇದ್ದ ₹65,000 ಕಳೆದುಹೋಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ ಗಣೇಶನ್, ಹಾಗು ಅವಿನಾಶ್ ಗುರುತು ಪತ್ತೆಯಾಗಿರುವ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಪ್ರಕರಣದ ತನಿಖೆಯನ್ನು ಬದಿಯಡ್ಕ ಪೊಲೀಸರು ಮುಂದುವರಿಸಿದ್ದು, ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವರ್ಗೀಯ ಸ್ವರೂಪದ ಪೋಸ್ಟ್ಗಳು ಹರಿದಾಡುತ್ತಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ.