ಮೂಗರನ್ನು ಪ್ರೀತಿಸಬಹುದು ಆದರೆ ಮೂಗರ ತರ ನಟನೆ ಮಾಡುವವರನ್ನು ಪ್ರೀತಿಸಿದರೆ ವ್ಯರ್ಥ, ಅಂಧರನ್ನು ಪ್ರೀತಿಸ ಬಹುದು ಆದ್ರೆ ಅಂಧಕಾರದಲ್ಲಿ ತೇಲಾಡುವವರು ಮೋಹಿಸಿದರೆ ಕಷ್ಟ, ಕಿವುಡರನ್ನು ಸ್ನೇಹಿಸಬಹುದು ಆದರೆ ನಾವಾಡುವ ಮಾತಿಗೆ ಕಿವಿಯಾಗದವರನ್ನು ಇಷ್ಟಪಟ್ಟು ಫಲ ಇಲ್ಲ.
ಹೌದು ಸ್ನೇಹಿತರೆ ನಾವು ಒಬ್ಬರನ್ನು ಇಷ್ಟಪಡಲು ಶುರು ಮಾಡುತ್ತೇವೆ . ಅವರ ಜೊತೆ ಬಾಳಿನಲ್ಲಿ ಹೆಜ್ಜೆ ಹಾಕಬೇಕೆಂಬ ಕನಸು ಕಾಣ್ತಾ ಇರ್ತೇವೆ . ಆದರೆ ನಮ್ಮ ಕನಸುಗಳು ಕನಸಾಗಿ ಉಳಿಯುವ ಕಾಲ ದೂರವೇನು ಉಳಿದಿರುವುದಿಲ್ಲ. ಎಷ್ಟೇ ಕಷ್ಟ ಬಂದರೂ ಸ್ನೇಹವನ್ನು ಪಡೆಯುವ ಉತ್ಸಾಹ ಹಂಬಲ ನಮ್ಮಲ್ಲಿ, ಆದರೆ ನಾವು ಸ್ನೇಹಿಸುತ್ತಿರುವುದೇ ಅವರಿಗೆ ಕಷ್ಟವಾಗಿ ಬಿಟ್ಟರೆ ಅದನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ಅರ್ಥವಾಗದ ಪ್ರೀತಿ ಅನರ್ಥವಾಗಿ ಹೋಗ್ತಾ ಇದೆ ಎಂದು ಕಂಡರೆ, ಅವರಿಗೆ ಕಷ್ಟವಾಗಿ ಬಿಟ್ಟರೆ ಅದನ್ನು ಮುಂದುವರೆಸುವುದು ವ್ಯರ್ಥ. ಎಲ್ಲಿ ನಮ್ಮ ಭಾವನೆಗಳಿಗೆ ಬೆಲೆ ಇಲ್ಲವೋ ಅಲ್ಲಿ ಭಾವನೆಗಳ ವಿನಿಮಯಕ್ಕೆ ಆಸ್ಪದ ನೀಡಬಾರದು.
ಹೀಗಿರುವ ಅನುಭವ ಪ್ರತಿಯೊಬ್ಬರ ಜೀವನದಲ್ಲೂ ನಡೆದಿದರ ಬಹುದು, ನಡೆಯುತ್ತಲೇ ಇರಬಹುದು. ಕೆಲವರು ಅದನ್ನು ಕೇವಲವಾಗಿ ಕಂಡರೆ, ಇನ್ನೂ ಕೆಲವರ ಬದುಕನ್ನೇ ಬದಲಾಯಿಸುವ ಹೊಸ ಅಧ್ಯಾಯವಾಗಿ ಬಿಟ್ಟಿರುತ್ತದೆ. ಸಾಮಾನ್ಯರು ಆ ಚಿಂತೆಯ ಸಂತೆಯಲ್ಲೇ ದಿನಗಳ ಕಳೆದ್ರೆ ಅಸಮಾನ್ಯರು ಆ ಚಿಂತೆಗೆ ಎಳ್ಳು ನೀರು ಬಿಟ್ಟು ಹೊಸ ಯೋಚನೆಯಲ್ಲಿ ತೊಡಗುತ್ತಾರೆ. ಚಿಂತಿಸಿ ಕೆಡಬೇಡ, ಮರುಗಬೇಡ ಅರ್ಥ ಆಗದ ಜೀವನದಲ್ಲಿ ನಾನಾ ತಿರುವುಗಳಿವೆ.