ಆಧುನಿಕತೆಯ ಭರಾಟೆಯಲ್ಲಿ ಧಾರ್ಮಿಕ ನಂಬಿಕೆಯ ಶಿಖರ ಮಣಿಯಂತೆ ಶೋಭಿಸುತ್ತಿರುವ ತುಳುನಾಡಿನ “ಕುಲೆ ಮದಿಮೆ”

ಧಾರ್ಮಿಕ ನಂಬಿಕೆಗಳು ಸನಾತನ ಧರ್ಮದ ಜೀವಾಳ. ಪ್ರಕೃತಿಯ ಚರಾಚರ ವಸ್ತುವಿನಲ್ಲೂ ದೈವ ದೇವರಿದ್ದಾರೆ ಎಂಬ ಅಚಲವಾದ ನಂಬಿಕೆ ನಮ್ಮದು .ಉದಾಹರಣೆಗೆ ಒಂದು ವೃಕ್ಷವನ್ನು ನಾವು ದೇವರು ಎಂಬ ಅಪಾರವಾದ ನಂಬಿಕೆಯಿಂದ ಪೂಜಿಸುತ್ತೇವೆ .ಅಂದರೆ ಆ ವೃಕ್ಷವನ್ನು ಕೇವಲ ಒಂದು ಮರವೆಂದು ಭಾವಿಸದೆ ಅದರಲ್ಲೂ ದೇವರಿದ್ದಾನೆ ಎಂಬ ನಂಬಿಕೆ ನಮ್ಮದು .ಅದನ್ನೇ ನಾವು ‘ಮೂಲತೋ ಬ್ರಹ್ಮರೂಪಾಯ ,ಮಧ್ಯತೋ ವಿಷ್ಣುರೂಪಾಯ ,ಅಗ್ರತೋ ಶಿವ ರೂಪಾಯ ವೃಕ್ಷ ರಾಜಾಯತೇ ನಮೋ ನಮಃ ‘ಎಂಬ ನಂಬಿಕೆ ನಮ್ಮದು . ಈ ಎಲ್ಲಾ ನಂಬಿಕೆಗಳ ಜೀವಂತಿಕೆಗೆ ಪ್ರದಾನ ಆಧಾರ ಸ್ಥ0ಭ ಜನಪದ ಆಚರಣೆ. ಅಂದರೆ ಪ್ರಾದೇಶಿಕವಾಗಿ ಆಯಾ ಗ್ರಾಮ ಪ್ರದೇಶದಲ್ಲಿ ನಾವು ಶ್ರದ್ದೆ ಮತ್ತು ನಂಬಿಕೆಯಿಂದ ಆಚರಿಸುತ್ತಿರುವ ಒಂದೊಂದು ನಂಬಿಕೆ ,ಆಚರಣೆಗಳು ದೇಶದ ಸನಾತನ ಸಂಸ್ಕೃತಿಯನ್ನು ಜೀವಂತವಾಗಿರಿಸಿದೆ..ಅದರಲ್ಲೂ ತುಳುನಾಡಿನಲ್ಲಿ ಪ್ರದಾನವಾಗಿ ಆಚರಿಸಲ್ಪಡುವ ದೈವಾರಾಧನೆ , ನಾಗಾರಾಧನೆಗಳು ನಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ.ಆಧುನಿಕತೆಯ ಭರಾಟೆಯಿಂದ ,ಆಧುನಿಕತೆಯ ತಂತ್ರಜ್ಞಾನ ಹೊಸ ಆವಿಷ್ಕಾರ ಬೆಳವಣಿಗೆ ಸಾಕಷ್ಟು ಆದರೂ ತುಳುನಾಡಿನ ನಂಬಿಕೆಯಲ್ಲಿ ಯಾವುದೇ ಬದಲಾವಣೆ ಆಗದೆ ತನ್ನದೇ ಆದ ವೈಶಿಷ್ಟತೆಯನ್ನು ಪಡೆದಿದೆ.ನಮ್ಮ ಎಲ್ಲಾ ನಂಬಿಕೆಯಲ್ಲೂ ವೈಜ್ಞಾನಿಕ ತಳಹದಿಯೂ ಇದೆ.ತುಳುನಾಡಿನ ಕೆಲವು ವಿಶಿಷ್ಟ ಆಚರಣೆಗಳು ಜೀವನ ಪದ್ಧತಿಯನ್ನು ವಿವರಿಸುವ ರೀತಿಯಾಗಿರುತ್ತದೆ.

ತುಳುನಾಡಿನ ಅದೆಷ್ಟೋ ಆಚರಣೆಗಳ ಪೈಕಿ “ಕುಲೆ ಮದಿಮೆ” ಯು ಬಹು ವಿಶಿಷ್ಟವಾದ ಮತ್ತು ಮಹತ್ವವಾದ ಆಚರಣೆಯಾಗಿದೆ. “ಕುಲೆ ಮದಿಮೆ” ಎಂದರೆ ನಿಧನರಾದ ಪ್ರೇತಾತ್ಮಗಳಿಗೆ ಕಂಕಣಭಾಗ್ಯವನ್ನು ಮಾಡುವುದು . “ಕುಲೆ ಮದಿಮೆ” ಎಂಬ ಪರಿಕಲ್ಪನೆಯು ಅನಾಧಿಕಾಲದ ಆಚರಣಾ ಪದ್ಧತಿಯಾಗಿದೆ.ಈ ಆಚರಣೆಯಲ್ಲಿ ಸಾಧಾರಣವಾಗಿ ನಾವು ಜೀವಿತಾವಧಿಯಲ್ಲಿ ಇರುವಾಗ ಯಾವ ರೀತಿ ಮದುವೆ ಸಂಪ್ರದಾಯ ನಡೆಯುತ್ತದೋ ,ಅದೇ ಸಂಪ್ರದಾಯ “ಕುಲೆ ಮದಿಮೆ” ಯಲ್ಲೂ ಆಚರಿಸಲ್ಪಡುತ್ತದೆ.ಆದರೆ ಇಲ್ಲಿ ನಿಧನರಾದ ಪ್ರೇತಾತ್ಮಗಳ ವಧು ವರರ ಬೊಂಬೆಯ ರೂಪಗಳನ್ನು ಮಾಡಲಾಗುತ್ತದೆ.ಈ ಬೊಂಬೆಯ ರೂಪಗಳನ್ನು ಮಾಡಲು ಬೈ ಹುಲ್ಲು ಅಥವಾ ಬಾಳೆ ದಿಂಡುಗಳನ್ನು ಉಪಯೋಗಿಸಲಾಗುತ್ತದೆ.ಈ ಬೈ ಹುಲ್ಲು ಅಥವಾ ಬಾಳೆ ದಿಂಡುಗಳಿಂದ ಮಾಡಿದಂತಹ ಈ ಬೊಂಬೆಗಳಿಗೆ ವಧು ಮತ್ತು ವರನನ್ನು ಪ್ರತ್ಯೇಕವಾಗಿ ಸಾಂಪ್ರದಾಯಿಕವಾಗಿ ಅಲಂಕರಿಸಿ ಗುರುಹಿರಿಯರ ತಂದೆ ತಾಯಂದಿರ ಆಶೀರ್ವಾದವನ್ನು ಪಡೆದು ಮದುವೆ ಮಂಟಪದಲ್ಲಿ ಅಕ್ಷತೆ ಕಾಳುಗಳನ್ನು ಹಾಕಿ ಮಾಂಗಲ್ಯ ಧಾರಣೆಯನ್ನ ಮಾಡಲಾಗುತ್ತದೆ.

ಮಾಂಗಲ್ಯ ಧಾರಣೆಯ ನಂತರ ಸೇರಿದವರು ದಕ್ಷಿಣೆಯನ್ನು ನೀಡಲು ತಟ್ಟೆಯೊಂದನ್ನು ಇಡುತ್ತಾರೆ.ಈ ತಟ್ಟೆಗೆ ತಮ್ಮ ಕೈಲಾಗುವ ದಕ್ಷಿಣೆಯ ಮೊತ್ತವನ್ನು ಆ ತಟ್ಟೆಗೆ ಹಾಕಲಾಗುತ್ತದೆ. ಈ ಮದುವೆಯು ಹೆಚ್ಚಾಗಿ ತರವಾಡು ಮನೆ ಅಥವಾ ಗುರುಹಿರಿಯರ ಮನೆಯಲ್ಲಿ ನಡೆಯುವುದು ಸಂಪ್ರದಾಯ ಮತ್ತು “ಕುಲೆ ಮದಿಮೆ” ಯು ಆಟಿ ತಿಂಗಳಲ್ಲಿ ಮಾತ್ರ ನಡೆಯುವುದು ವಾಡಿಕೆ . “ಕುಲೆ ಮದಿಮೆ” ಯಾ ಆಚರಣೆಯಲ್ಲೂ ಸೂಕ್ತವಾದ ವಧು ವರರ ಹುಡುಕಾಟ ,ಹೊಂದಾಣಿಕೆ ಇದೆಲ್ಲವನ್ನೂ ಪರಿಗಣಿಸಲಾಗುತ್ತದೆ.ಜೀವಿತಾವಧಿಯಲ್ಲಿ ಯಾವ ರೀತಿಯಾಗಿ ಮದುವೆ ಕಾರ್ಯಗಳು ನಡೆಯುತ್ತದೋ ಅದೆಲ್ಲಾ ಸಂಪ್ರದಾಯ ಮತ್ತು ರೀತಿಯನ್ನು “ಕುಲೆ ಮದಿಮೆ” ಯನ್ನು ಅನುಸರಿಸಲಾಗುವುದು .ಈ ರೀತಿಯಾಗಿ ಗೊಂಬೆಗಳಿಂದ ಮಾಡಿದ ವಧು ವರರನ್ನು ಮಾಂಗಲ್ಯ ಧಾರಣೆಯ ನಂತರ ಈ ಗೊಂಬೆಗಳನ್ನು ಕಾಸರಕ್ಕ( ಕಾಯರ್ ) ಮರದ ಅಡಿಯಲ್ಲಿ ಇಡಲಾಗುವುದು .

ಈ ರೀತಿಯಾಗಿ ಕೆಲವು ವಿಶಿಷ್ಟ ಆಚರಣೆ ಸಂಪ್ರದಾಯಗಳು ಆಧುನಿಕತೆಯ ಹೆಸರಿನಲ್ಲಿ ಮರೆಮಾಚದೆ ತನ್ನದೇ ಆದ ವಿಶಿಷ್ಟತೆಯಿಂದ ಮುಂದುವರಿಯುತ್ತಿರುವುದು ಶ್ಲಾಘನೀಯವಾಗಿದೆ.

SURESH MANGALPADY

SHARE
Loading spinner

Leave a Reply

Your email address will not be published. Required fields are marked *

error: Content is protected !!