ಗಡಿನಾಡಿನಲ್ಲಿ ನಿರಂತರ ಕನ್ನಡ ಕಲರವಿಸಲು ಭಾಷಾ ಅಭಿಮಾನಿಗಳು, ಭಾಷೆಯ ಆಡುವವರು ಎಷ್ಟು ಮುಖ್ಯವೋ ಇವುಗಳಿಗೆ ನೀರರೆಯುವ ಸಾಹಿತ್ಯ , ಕನ್ನಡ ಭವನ, ಕನ್ನಡ ಶಾಲೆಗಳು ಅಷ್ಟೇ ಮುಖ್ಯ. ಒಂದು ಕಾಲದಲ್ಲಿ ನೂರಾರು ಶಾಲೆಗಳು ಅಸ್ತಿತ್ವದಲ್ಲಿದ್ದು ಅವುಗಳನ್ನೆಲ್ಲಾ ಸುವರ್ಣಾಕ್ಷರದಲ್ಲಿ ಬರೆಯುತ್ತಿದ್ದ ಕಾಲವದು. ಇಂದು ಆ ಸಂಖ್ಯೆಗಳು ಕುಗ್ಗುತ್ತಾ ಇದೆ, ಭಾಷಾ ಅಭಿಮಾನ ಇಲ್ಲಿನ ಅನ್ಯ ಭಾಷೆಯ ಮೇಲಿನ ವ್ಯಾಮೋಹದಿಂದ ಕಡಿಮೆ ಆಗ್ತಾ ಇದೆ.
ಈ ವ್ಯಾಮೋಹದ ಜಾಲವು ಬಹುಶಃ ಗಡಿನಾಡು ಕೈ ತಪ್ಪಿದಾಗಿನಿಂದ ಆರಂಭವಾಗಿತ್ತೆಂಬುದು ಸ್ಪಷ್ಟ. ಗಡಿನಾಡ ಕನ್ನಡಿಗರ ಅತಂತ್ರ ಸ್ಥಿತಿ ಶುರುವಾಗಿದ್ದೇ ಆಗಿನಿಂದ. ಅದಕ್ಕೆ ಮುನ್ನುಡಿಯನ್ನು ಅಂದಿನ ರಾಜಕೀಯ ವ್ಯಕ್ತಿಗಳು ಬರೆದು , ಯಾವುದೋ ದೂರ ಉದ್ದೇಶಕ್ಕೂ ದುರುದ್ದೇಶಕ್ಕೂ ಕರುನಾಡಿನ ಒಡಲಿನ ಗಡಿನಾಡನ್ನು ವಿಭಾಗಿಸಿ ನಮ್ಮನ್ನು ಅನಾಥರಾಗಿ ಮಾಡಿಬಿಟ್ಟರು. ಭೌಗೋಳಿಕವಾಗಿ ಬೇರ್ಪಟ್ಟ ನಾವುಗಳು ಒಂದಾದ ಮೇಲೆ ಒಂದರಂತೆ ಸಮಸ್ಯೆಗಳನ್ನು ಈ ಭಾಗದಲ್ಲಿ ಎದುರಿಸ್ತಾ ಇದ್ದೇವೆ. ಕವಿ ಮಹಾತ್ಮರು ಈ ವಿಭಜನೆಯ ವಿರುದ್ಧ ಹೋರಾಟ ಮಾಡಿದರು , ಚಳುವಳಿಗಳನ್ನು ಸಂಘಟಿಸಿದರು , ಭಾಷಾ ಅಭಿಮಾನದಿಂದ ಹೋರಾಟ ಕಾವೇರಿದರು ಅದು ಸಫಲವಾಗಲೇ ಇಲ್ಲ. ಕರುನಾಡಿನೊಂದಿಗೆ ಮತ್ತೆ ಸೇರುವ ಭಾಗ್ಯ ಒದಗಿ ಬರಲೇ ಇಲ್ಲ. ಮುಂದೆ ಅದು ಸೇರುವುದು ಕನಸಿನ ಮಾತೇ ಆಗಿದೆ.
ಲೆಕ್ಕಕ್ಕೆ ಸಿಗದಷ್ಟು ಅಂದು ಇದ್ದ ಕನ್ನಡ ಶಾಲೆ, ಅಭಿಮಾನದಿಂದ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸುತಿದ್ದ ಹೆತ್ತವರ ಉಸ್ಸಾಹ ಉಲ್ಲಾಸ ಇಂದು ಕಡಿಮೆ ಆಗುತ್ತಿದೆ. ಇಂದಿನ ಮಟ್ಟಿಗೆ ಕಾಸರಗೋಡಿನ ಕನ್ನಡ ಶಾಲೆಯ ಭೌತಿಕ ಸ್ಥಿತಿಯು ಉತ್ತಮವಾಗಿದ್ದರೂ ದಾಖಲಾತಿಯು ಮೊದಲಿನಂತಿಲ್ಲ. ಸೊರಗುತ್ತಿದೆ ಇಲ್ಲಿನ ಕನ್ನಡ ಭಾಷಾ ಅಭಿಮಾನ ಯಾಕೆಂದರೆ ಅನ್ಯ ಭಾಷೆಯ ಮೇಲಿನ ಅಭಿಮಾನದ ವ್ಯಾಮೋಹವು ಕಣ್ಣಿಗೆ ಆಕರ್ಷಕವಾಗಿ ಕಾಣುತ್ತಿದೆ. ಚಂದ್ರಗಿರಿ ನದಿಯ ಉತ್ತರ ಶಾಲೆಗಳ ಸ್ಥಿತಿ ಸ್ಪಲ್ಪ ಮಟ್ಟಿಗೆ ಉತ್ತಮವೆಂದೇ ಹೇಳಬಹುದು . ಆದ್ರೆ ಚಂದ್ರಗಿರಿಯ ದಕ್ಷಿಣಕ್ಕೆ ಬರುವ ಶಾಲೆಗಳ ಸ್ಥಿತಿ ಗತಿಗಳು ಇಂದು ದುಸ್ತಿಗೆ ತಲುಪುತ್ತಿದೆ. ಅದೆಷ್ಟೋ ಕನ್ನಡ ಶಾಲೆಗಳ ಕದ ಮುಚ್ಚುತ್ತಿದೆ. ಈ ಕದ ಮುಚ್ಚುವುದರೊಂದಿಗೆ ಆ ಶಾಲೆಯ ಕನ್ನಡದ ಇತಿಹಾಸವೇ ಮರೆಯಾಗುತ್ತಿರುವುದು ದುರಂತ.
ಚಂದ್ರಗಿರಿ ನದಿಯ ದಕ್ಷಿಣ ಭಾಗದವನೇ ಆದ ನನಗೆ ಇವುಗಳ ಬಗ್ಗೆ ತಿಳಿಯಲು ಯಾವ ಸಂಶೋಧನೆಯ ಅಗತ್ಯ ಇಲ್ಲ, ಯಾವ ಕೃತಿಯು ಓದಬೇಕೆಂದಿಲ್ಲ . ದಿನ ನಿತ್ಯ ಕಣ್ಣಾರೆ ನೋಡುವ ಕಿವಿಯಾರೆ ಕೇಳುವ ವಾಸ್ತವ ಸ್ಥಿತಿ ಎದ್ದು ಕಾಣುತ್ತಿದೆ. ಇಲ್ಲಿನ ಭಾಷಾ ಅಭಿಮಾನ ಕುಗ್ಗುತ್ತಿರುವ ಸ್ಪಷ್ಟ ಚಿತ್ರಣ ಇಲ್ಲಿ ಕಾಣುತ್ತಿದೆ. ನನ್ನ ಊರಲ್ಲಿ ಇರುವ ಏಕೈಕ ಕನ್ನಡ ಶಾಲೆ ಕೀಕಾನಕ್ಕೆ ಸೇರುವ ಮಕ್ಕಳು ಬೆರಳೆಣಿಕೆಯಷ್ಟು ಆಗಿ ಬಿಟ್ಟಿದ್ದಾರೆ, ಯಾಕೆಂದರೆ ಈವಾಗ ಇಂಗ್ಲೀಷು ಬೆಸ್ಟು ಅಲ್ವೇ ಹಾಗೇ.
ಕೆಲವರು ಒಂದು ಅಭಿಪ್ರಾಯಕ್ಕೆ ಬದ್ದರಾಗಿರುತ್ತಾರೆ , ಬಂಧಿಯಾಗಿರುತ್ತಾರೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತರೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಸಿದ್ದಿ ಎಂದು ಆದ್ರೆ ಕನ್ನಡ ಶಾಲೆಯಲ್ಲಿ ಕಲಿತರೆ ಈ ಮೂರು ಅಂಶದ ಜೊತೆಯಲ್ಲಿ ವಿಚಾರ ಜ್ಞಾನವು ಬರುತ್ತದೆ. ಈ ವಿಚಾರ ಜ್ಞಾನವೇ ನಮ್ಮ ಬದುಕನ್ನು ಹೇಗೆ ಕೊಂಡು ಹೋಗಬೇಕೆಂದು ತಿಳಿಸುತ್ತದೆ. ಅದನ್ನು ತಿಳಿಸುವುದು ಪಸರಿಸುವುದು ಕನ್ನಡ ಶಾಲೆಗಳು ಮಾತ್ರ. ಈ ಕ್ಷಣ ನನ್ನ ವಿಚಾರಧಾರೆಗಳಿಗೆ ಮುನ್ನುಡಿಯನ್ನು ಬರೆದ ಹೆಮ್ಮೆಯ ಕೀಕಾನ ಸರಕಾರಿ ಶಾಲೆಯ ಬಗ್ಗೆ ನಾನು ಹೇಳಲೇ ಬೇಕು.
ಜ್ಞಾನದ ಗುಡಿಯಲ್ಲಿ ಕನ್ನಡ ದೀಪ ಏಳುಬೀಳಿನ ನಡುವೆ ಉರಿಯುತ್ತಾ ಇದೆ ಇಲ್ಲಿ . ಚಿತ್ತಾರಿ ನದಿಯ ಪರಿಸರದಲ್ಲಿ ಬೇಕಲ ಕೋಟೆಯಿಂದ ನಾಲ್ಕು ಐದು ಕಿಲೋ ಮೀಟರ್ ದೂರದಲ್ಲಿ ಕೀಕಾನ ಎನ್ನುವ ಗ್ರಾಮವಿದೆ. ಈ ಊರಿನಲ್ಲಿ ಇರುವುದು ಕನ್ನಡಮ್ಮನ ತೇರನ್ನು ಎಳೆಯೋ ಎಲ್ ಪಿ ಮತ್ತು ಯು ಪಿ ಶಾಲೆ. ಇಲ್ಲಿನ ಮಕ್ಕಳಿಗೆ ವಿದ್ಯೆಯ ಹಸಿವನ್ನು ನೀಗಿಸಲೆಂದು, ಜ್ಞಾನಾರ್ಜನೆ ಮಾಡ್ಬೇಕೆಂದು, ಸುಜ್ಞಾನಿಗಳು ಆಗಬೇಕೆಂದು ರಾಮಚಂದ್ರ ರಾವ್ ಎನ್ನುವರಿಂದ ಸ್ಥಾಪಿತವಾದ ಈ ಶಾಲೆಯು ರಾಮಚಂದ್ರ ರಾವ್ ಮೆಮೋರಿಯಲ್ ಸ್ಕೂಲ್ ಆಗಿ ಪ್ರಖ್ಯಾತಿ ಪಡೆದದ್ದು ಇಂದು ಇತಿಹಾಸ. ಈ ಶಾಲೆಯು ತನ್ನದೇ ಆದ ಐತಿಹ್ಯ ಪರಂಪರೆಯನ್ನು ಒಡಲಿನಲ್ಲಿ ಇಟ್ಟುಕೊಂಡಿದೆ. ಬಹುಶಃ ನಾನು ಈ ಶಾಲೆಯಲ್ಲಿ ಕಲಿಯದೇ ಇರುತ್ತಿದರೆ. ಸಣ್ಣ ಬರಹಗಾರನೂ ಆಗುತ್ತಿರಲಿಲ್ಲ. ಭಾಷಾ ಅಭಿಮಾನವು ನನ್ನಲ್ಲಿ ಹುಟ್ಟುತ್ತಿರಲ್ಲಿಲ್ಲ. ಸುತ್ತಲೂ ಮಲಯಾಳ, ಆಂಗ್ಲ ಮಾಧ್ಯಮ ಶಾಲೆಗಳು ಇದ್ದರೂ ನನ್ನ ಹೆತ್ತವರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ತೀರ್ಮಾನಕ್ಕೆ ಬಂದು ನನ್ನನ್ನು ಇದೇ ಶಾಲೆಗೆ ಸೇರಿಸಿದರು. ನಾ ಶಾಲೆಗೆ ಸೇರುವ ಮುನ್ನ ಅದೆಷ್ಟೋ ಸಾಧಕರಿಗೆ ಈ ಶಾಲೆ ಬೆನ್ನು ತಟ್ಟಿತ್ತು. ಕನ್ನಡ ಶಾಲೆಯೆಂದು ತಿರಸ್ಕಾರ ಮಾಡುವವರಿಗೆ ಬಾಯಿಯನ್ನು ಮುಚ್ಚಿಸಿತ್ತು.
ಕೀಕಾನ ಶಾಲೆಯು ಕನ್ನಡ ಮಾಧ್ಯಮ ಶಾಲೆಯಾಗಿ ಹುಟ್ಟಿಕೊಂಡು ನಂತರ ಮಲಯಾಳಂ ಮಾಧ್ಯಮ ಜೊತೆಯಾಗಿ ಹೆಜ್ಜೆ ಹಾಕುತ್ತಾ ಇಂದಿಗೂ ಮಕ್ಕಳಿಗೆ ವಿದ್ಯೆಯ ಧಾರೆ ಎರೆಯುತ್ತಿದೆ. ಇಂದಿಗೂ ಕನ್ನಡ ತನಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸುತ್ತಾ ಶಿಕ್ಷಣ ಕ್ರಾಂತಿಯನ್ನು, ಕನ್ನಡ ಭಾಷಾ ಬೆಸುಗೆಗೆ ಕೈಗನ್ನಡಿಯನ್ನು ಹಿಡಿಯುತ್ತಿದೆ.
ನಮ್ಮ ಶಾಲೆಯ ವಿನ್ಯಾಸವೇ ಚಂದ ಕಬ್ಬಿಣದ ಕಂಬಿಗೆ ತೂಗಿ ಹಾಕಿದ್ದ ಬೆಲ್, ಬೆಲ್ ಹೊಡೆಯಲು ಸದಾ ಅದರ ಜೊತೆಗಿರುತ್ತಿದ್ದ ಸುತ್ತಿಗೆ, ಬೆಳಗ್ಗೆ ಸಂಜೆ ಇರುತ್ತಿದ ಪ್ರಾರ್ಥನೆ, ರಾಷ್ಟ್ರ ಗೀತೆ, ವಿಶೇಷ ದಿನಗಳಲ್ಲಿ ಅಸೆಂಬ್ಲಿ, ಅಲ್ಲಿ ಹಂಚುತ್ತಿದ್ದ ಸಿಹಿ, ಮಳೆಗೆ ಮೈದಾನದಲ್ಲಿ ನೆನೆಯುತ್ತಿದ್ದ ದಿನ, ಹಂಚಿನ ಸೂರಿನಲ್ಲಿ ಬರುತ್ತಿದ್ದ ನೀರಿನಿಂದ ತೊಳೆಯುತ್ತಿದ್ದ ಅನ್ನದ ಬಟ್ಟಲು, ಹಂಚಿ ತಿನ್ನುತ್ತಿದ್ದ ವಿಠಾಯಿ, ಹಂಚಿನ ಚಾವಡಿ ನೋಟ , ಪಳ ಪಳ ಹೊಳೆಯುತ್ತಿದ್ದ ಹಳದಿ ಬಣ್ಣದ ಗೋಡೆ, ಸ್ನೇಹ ಕೂಟದಲ್ಲಿ ಪರಸ್ಪರ ಬೆಸೆಯುವ ಮನಸುಗಳಿರುವ ತರಗತಿ, ಜ್ಞಾನವ ಸಾಕ್ಷಾತ್ಕಾರ ಮಾಡುವ ಗುರುಗಳು ಸಿಕ್ಕಿದು ಮಾತ್ರ 1 ರಿಂದ 7 ನೇ ತರಗತಿಯಲ್ಲಿ ಕಲಿತ ಸರಕಾರಿ ಶಾಲೆಯಲ್ಲಿ. ಎಷ್ಟೆಲ್ಲ ಮೋಜು ಮಸ್ತಿ ಜೊತೆಗೆ ಕಲಿಕೆ, ಕನ್ನಡ ಸಾಹಿತ್ಯ ದರ್ಶನ ಇವುಗಳೆಲ್ಲವೂ ಈ ಸರಕಾರಿ ಶಾಲೆಯಲ್ಲಿ ಮಾತ್ರ ಸಿಗುವ ಅಮೃತಕ್ಕಿಂತಲೂ ಮಿಗಿಲಾದ ದಿವ್ಯ ಔಷಧಿಯಾಗಿದೆ. ಅದು ಈ ಶಾಲೆಯಲ್ಲಿ ಅಲ್ಲದೆ ಮತ್ತೆಲಿ ಸಿಗುವುದು?!. ಸಾವಿರಾರು ಕನ್ನಡ ಮಕ್ಕಳ ಪಾಲಿನ ವರದಾನವಾದ ಈ ಶಾಲೆಯ ಗತ ವೈಭವ ಗಡಿನಾಡ ಗುಡಿಯಲ್ಲಿ ಕನ್ನಡ ತನವನ್ನು ಬೋಧಿಸುವ ಶಾಲೆ ಚಿರ ಕಾಲ ಉಳಿಯಬೇಕು. ಕನ್ನಡ ಅಕ್ಷರ ದಾಸೋಹ ಮಾಡುತ್ತಾ ಮುಂದುವರೆಯಬೇಕು.
ಹೆತ್ತವರಲ್ಲಿ ಕನ್ನಡ ಅಭಿಮಾನ ಅದನ್ನು ಮಕ್ಕಳು ಕಲಿಯಬೇಕೆಂಬ ಹಂಬಲ ಇದ್ದರೆ ಮಾತ್ರ ಗಡಿನಾಡ ಗುಡಿಯಲ್ಲಿ ಕನ್ನಡ ಬಳಕೆ ಉಳಿಕೆ ಸಾಧ್ಯ. ಇತರ ಭಾಷೆಯ ಅಭಿಮಾನ ಬೇಕು, ಓದಲು ಬರೆಯಲು ಗೊತ್ತಿರಬೇಕು. ಆದ್ರೆ ಮಾತೃ ಭಾಷೆ ತಿಳುವಳಿಕೆ ಅಗತ್ಯವಾಗಿ ಬೇಕಾಗುತ್ತೆ. ಅದನ್ನು ರಕ್ಷಿಸುವ ಹೊಣೆ ನಮ್ಮಲ್ಲಿದೆ.
ನಾವು ಕನ್ನಡ ಬಳಕೆಯನ್ನು ಕಡಿಮೆ ಮಾಡಿದರೆ, ಕನ್ನಡ ಅಭಿಮಾನ ನಮ್ಮಲ್ಲಿ ಕಡಿಮೆ ಆದರೆ ನಮ್ಮ ತನ ಸೊತ್ತಂತೆ. ನಮ್ಮ ತನ ಸೋತರೆ ನಮ್ಮ ಇತಿಹಾಸ ಪರಂಪರೆ ಅಥಪತನ ಆದಂತೆ. ಕನ್ನಡ ಮಾದ್ಯಮ ಶಾಲೆಗಳು ಯಾವಾಗ ಕದವನ್ನು ಮುಚ್ಚುವುದೋ ಆ ದಿನವೇ ನಮ್ಮ ಇತಿಹಾಸ ಮರೆಯಾಗುವುದು. ಅಳಿದರೆ ಕನ್ನಡ ಉಳಿಯದು ಸಂಸ್ಕೃತಿ.
✍🏻ಗಿರೀಶ್ ಪಿಎಂ ಕಾಸರಗೋಡು