ಮದುವೆ ಚಪ್ಪರದೊಳಗೆ ಕಾಲಿಟ್ಟಿದ್ದೇ ತಡ, ಮನೆಯ ಹಿರಿಯರು ಮತ್ತು ಬಂಧುಗಳು ನಗುನಗುತ್ತಾ ಹತ್ತಿರ ಬಂದು, “ಬಿಸೇಸ ದಾದ?” (ಏನು ವಿಶೇಷ?), “ಇಲ್ಲಡ್ ಮಾತೇರ್ಲಾ ಸೌಖ್ಯನಾ?” (ಮನೆಯಲ್ಲಿ ಎಲ್ಲರೂ ಆರಾಮಾ?), “ಬನ್ನಗ ತೊಂದರೆ ಆಯಿಜಾ ಅತಾ?” (ಬರುವ ದಾರಿಯಲ್ಲಿ ಏನೂ ತೊಂದರೆಯಾಗಲಿಲ್ಲವಲ್ಲ?) ಅಂತ ಪ್ರೀತಿಯಿಂದ ಮುತ್ತಿಗೆ ಹಾಕುತ್ತಾರೆ.
ತುಳುನಾಡಿನವರಿಗೆ ಅತಿಥಿ ಸತ್ಕಾರ ಅಂದ್ರೆ ಹೊಟ್ಟೆ ಬಿರಿಯುವಷ್ಟು ಊಟ ಹಾಕುವುದೇ! “ವನಸ್ ಆಂಡಾ?” (ಊಟ ಆಯಿತಾ?), “ಚಾ-ಕಾಪಿ ಪರೊಂಡರಾ?” (ಚಹಾ-ಕಾಫಿ ಕುಡಿದ್ರಾ?) ಅನ್ನೋ ಪ್ರಶ್ನೆಗಳು ಸುತ್ತಲಿಂದ ತೇಲಿಬರುತ್ತಲೇ ಇರುತ್ತವೆ. ಇನ್ನು ‘ಸಾಕು, ಹೊಟ್ಟೆ ತುಂಬಿದೆ’ ಅಂದ್ರೂ ಕೇಳುವವರೇ ಇಲ್ಲ; “ಬಲೆ, ವನಸ್‌ಗ್ ಪೋಯಿ” (ಬನ್ನಿ, ಊಟಕ್ಕೆ ಹೋಗೋಣ) ಅಂತ ಕೈಹಿಡಿದು ಎಳೆದುಕೊಂಡು ಹೋಗಿ ಊಟದ ಪಂಕ್ತಿಯಲ್ಲಿ ಕೂರಿಸುವುದೇ ಇವರ ಆತಿಥ್ಯದ ಸ್ಟೈಲ್.

ವಧೂವರರ ಅಪ್ಪ-ಅಮ್ಮಂದಿರು ಮಾತ್ರವಲ್ಲ, ಮಾವಂದಿರು, ಚಿಕ್ಕಪ್ಪಂದಿರು, ಕಸಿನ್‌ಗಳೆಲ್ಲರೂ ಹಾಲ್ ತುಂಬಾ ಓಡಾಡುತ್ತಾ ಪ್ರತಿಯೊಬ್ಬ ಅತಿಥಿಯನ್ನೂ ಸ್ಪೆಷಲ್ ಆಗಿ ನೋಡಿಕೊಳ್ಳುತ್ತಾರೆ. ಕೊನೆಗೆ ಹೊರಡುವಾಗ ವೀಳ್ಯದೆಲೆ-ಅಡಿಕೆ (ಬಚ್ಚಿರೆ-ಬಜ್ಜೆಯ್) ಕೈಗಿಟ್ಟು “ಜೋಪಾನ ಪೋಯಿ” (ಹುಷಾರಾಗಿ ಹೋಗಿ) ಅಂತ ಬೀಳ್ಕೊಡುವಲ್ಲಿಗೆ ಈ ಪ್ರೀತಿಯ ‘ಉಪಚಾರ’ ಮುಗಿಯುತ್ತದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ತುಳುನಾಡಿನಲ್ಲಿ, ಮದುವೆ ಮನೆಗೆ (ಮದ್ಮೆ) ಅಥವಾ ಯಾವುದೇ ಕೌಟುಂಬಿಕ ಸಮಾರಂಭಗಳಿಗೆ ಬರುವ ಅತಿಥಿಗೆ ಸಿಗುವ ಈ ರಾಜಾತಿಥ್ಯಕ್ಕೆ ತುಳುವಿನಲ್ಲಿ ‘ವಿಚಾರಣೆ ಮಾಲ್ಪುನೆ’ (Vichaarane maalpune) ಅಂತ ಕರೆಯುತ್ತಾರೆ. ಅಕ್ಷರಶಃ ‘ವಿಚಾರಿಸುವುದು’ ಅಂತ ಅರ್ಥವಾದರೂ, ತುಳು ಸಂಸ್ಕೃತಿಯಲ್ಲಿ ಇದೊಂದು ಬರೀ ಫಾರ್ಮಾಲಿಟಿ ಕುಶಲೋಪರಿಯಲ್ಲ; ಬದಲಾಗಿ ಅತಿಥಿಯ ಮೇಲಿನ ಪ್ರೀತಿ ಮತ್ತು ಗೌರವವನ್ನು (ಮರ್ಯಾದೆ) ತೋರಿಸುವ ಅಪ್ಪಟ ಆತಿಥ್ಯ ಮರ್ಯಾದೆ.

ಇನ್ನು ಸಪ್ತಭಾಷಾ ಸಂಗಮಭೂಮಿಯಾದ ಕಾಸರಗೋಡಿನಲ್ಲಿ, ಈ ಮನೆಯ ಕಾಂಪೌಂಡ್ ದಾಟಿ ಪಕ್ಕದಲ್ಲೇ ಇರುವ ಒಂದು ಮಲಯಾಳಿ ಮನೆಯತ್ತ ಇಣುಕಿ ನೋಡೋಣ. ಅಲ್ಲೂ ಈ ಪದ ಸಖತ್ ಫೇಮಸ್—ಆದ್ರೆ ‘ವಿಚಾರಣೆ’ (ತುಳು ಉಚ್ಚಾರಣೆಯಂತೆ) ಅಂತಲ್ಲ, ಮಲಯಾಳಂನ ‘ವಿಚಾರಣ’ (Vichaarana) ಅಂತಷ್ಟೇ!
ಉಚ್ಚಾರಣೆಯಲ್ಲಿ ಕೊನೆಯ ಅಕ್ಷರದಲ್ಲಾಗುವ ಒಂದು ಪುಟ್ಟ ಸ್ವರ ಬದಲಾವಣೆ (Vowel shift) ಬಿಟ್ಟರೆ ಪದ ಒಂದೇ. ಆದ್ರೆ ಎರಡೂ ಭಾಷೆಗಳಲ್ಲಿ ಈ ಪದ ಕಿವಿಗೆ ಬಿದ್ದಾಗ ಮನಸ್ಸಿನಲ್ಲಿ ಮೂಡುವ ಸೀನ್‌ಗಳಿಗೆ ಮಾತ್ರ ಅಜಗಜಾಂತರ ವ್ಯತ್ಯಾಸವಿದೆ!

ಒಬ್ಬ ಮಲಯಾಳಿಯ ಮುಂದೆ ಹೋಗಿ “ಅವನನ್ನು ಚೆನ್ನಾಗಿ ವಿಚಾರಣ ಮಾಡಿದ್ರು” ಅಂತಲೋ ಅಥವಾ “ಇವತ್ತು ವಿಚಾರಣ ಶುರುವಾಗ್ತಿದೆ” ಅಂತಲೋ ಹೇಳಿ ನೋಡಿ; ಅವರ ಕಣ್ಣಮುಂದೆ ಮದುವೆ ಚಪ್ಪರವೋ, ಬಾಳೆಎಲೆ ಊಟವೋ ಬರುವುದೇ ಇಲ್ಲ! ಬದಲಾಗಿ ಕಪ್ಪು ಕೋಟು ಹಾಕಿಕೊಂಡ ವಕೀಲರು ಮತ್ತು ಗಂಭೀರ ಮುಖದ ಜಡ್ಜ್ ಮುಂದೆ, ಕೋರ್ಟ್ ಕಟಕಟೆಯಲ್ಲಿ ಬೆವರುತ್ತಾ ನಿಂತಿರುವ ಸೀನ್ ಕಣ್ಣಮುಂದೆ ಬರುತ್ತದೆ. ಅದೂ ಇಲ್ಲ ಅಂದ್ರೆ ಪೊಲೀಸ್ ಸ್ಟೇಷನ್ ರೂಮಿನಲ್ಲಿ ಕೂತು ಪೊಲೀಸರ ನಾನ್-ಸ್ಟಾಪ್ ಪ್ರಶ್ನೆಗಳಿಗೆ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿಯ ಚಿತ್ರ ಕಣ್ಣಮುಂದೆ ಸುಳಿಯುತ್ತದೆ. ಸಿಂಪಲ್ ಆಗಿ ಹೇಳಬೇಕಂದ್ರೆ, ತುಳುನಾಡಿನವರಿಗೆ ‘ವಿಚಾರಣೆ’ ಅಂದ್ರೆ ಹೊಟ್ಟೆ ತುಂಬಾ ಊಟ ಮತ್ತು ಪ್ರೀತಿ ಸಿಗುವ ನೆಮ್ಮದಿಯ ಪದ; ಅದೇ ಪಕ್ಕದ ಮನೆಯ ಮಲಯಾಳಿಗೆ ‘ವಿಚಾರಣ’ ಅಂದ್ರೆ ಒಳಗಿರುವ ಸತ್ಯವನ್ನೆಲ್ಲಾ ಹೊರಗೆಳೆಯುವ ಎದೆ ಢವಢವ ಅನ್ನಿಸುವ ಪದ!

ಭಾಷಾಶಾಸ್ತ್ರದಲ್ಲಿ ಒಂದೇ ರೀತಿ ಕಾಣಿಸುವ, ಆದ್ರೆ ತದ್ವಿರುದ್ಧ ಅರ್ಥಗಳನ್ನು ಕೊಡುವ ಇಂತಹ ಪದಗಳನ್ನು ‘ಮಿಥ್ಯಾ ಮಿತ್ರರು’ (False Friends) ಅಂತ ಕರೆಯುತ್ತಾರೆ. ಜೊತೆಗೆ, ಒಂದು ಪದ ಕಾಲಕ್ರಮೇಣ ಬೇರೆ ಬೇರೆ ಸಮುದಾಯಗಳಲ್ಲಿ ವಿಭಿನ್ನ ಅರ್ಥದ ನೆಲೆಗಳಿಗೆ ಹೊರಳುವ ‘ಅರ್ಥವಿಕಾಸಕ್ಕೆ’ (Semantic Shift) ಕೂಡ ಇದೊಂದು ಬೆಸ್ಟ್ ಎಕ್ಸಾಂಪಲ್. ಸಂಸ್ಕೃತದ ‘ವಿಚಾರಣ’ (ಅನ್ವೇಷಣೆ, ಪರಿಶೀಲನೆ) ಎಂಬ ಒಂದೇ ಮೂಲಪದದಿಂದ ಈ ಎರಡೂ ಪದಗಳು ಹುಟ್ಟಿಕೊಂಡಿವೆ. ಆದ್ರೆ ತುಳು ಸಮುದಾಯಕ್ಕೆ ಬಂದಾಗ ‘ವಿಚಾರಿಸುವುದು’ ಅನ್ನೋದು ಅತಿಥಿಗಳ ಯೋಗಕ್ಷೇಮ ಕೇಳುವ ಪ್ರೀತಿಯ ಕಾಳಜಿಯಾಗಿ ಬದಲಾಯಿತು. ಇನ್ನೊಂದೆಡೆ ಮಲಯಾಳಂನಲ್ಲಿ ಅದು ಕಾನೂನು ಮತ್ತು ಕೋರ್ಟ್ ವ್ಯವಸ್ಥೆಯ ಭಾಗವಾದ ಕಠಿಣ ಪ್ರಶ್ನೋತ್ತರಕ್ಕೆ ಸೀಮಿತವಾಯಿತು.
ಹಾಗಾಗಿ ಇನ್ಮುಂದೆ ಕಾಸರಗೋಡು ಕಡೆಗೆ ಟ್ರಿಪ್ ಹೋದಾಗ ಒಂದು ವಿಷಯ ನೆನಪಿರಲಿ—ಅಲ್ಲಿನ ಯಾವುದಾದ್ರೂ ತುಳು ಫ್ರೆಂಡ್ “ಮದುವೆಗೆ ಬರಬೇಕು, ನಮಗೆ ನಿಮ್ಮನ್ನು ಚೆನ್ನಾಗಿ ವಿಚಾರಣೆ ಮಾಡೋದಿದೆ” ಅಂತ ಕರೆದ್ರೆ ಸ್ವಲ್ಪವೂ ಗಾಬರಿಯಾಗಬೇಡಿ! ಲಾಯರ್‌ಗೆ ಫೋನ್ ಮಾಡೋದಾಗಲಿ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕೋದಾಗಲಿ ಬೇಡವೇ ಬೇಡ; ಒಳ್ಳೆ ಹಸಿವಿನೊಂದಿಗೆ ಹೋದರೆ ಸಾಕು, ಹೊಟ್ಟೆ ಮತ್ತು ಮನಸ್ಸು ಎರಡನ್ನೂ ತುಂಬಿಸಿಕೊಂಡು ಆರಾಮಾಗಿ ವಾಪಸ್ ಬರಬಹುದು!

ನಿಜಾರ್ ಪೆರುವಾಡ್

