ಎಲ್ಲರಿಗೂ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ಹೌದು ಮತ್ತೆ ಬಂದೇ ಬಿಟ್ಟಿತ್ತು ಕ್ಯಾಲೆಂಡರ್ ಹೊಸ ವರ್ಷ. ಕಳೆದು ಹೋದ ದಿನಗಳಲ್ಲಿ ಅದೆಷ್ಟೋ ತುಂಬಿದ ಕ್ಷಣಗಳು ಬೇಸರದ ನಿಮಿಷಗಳು ಸಂತಸದ ಗಳಿಗೆಗಳು ಕಳೆದು ಹೋಗಿರಬಹುದು. ಅನುಭವದ ಸಂತೆಯಲ್ಲಿ ಆ ದಿನಗಳು ತನ್ನ ಛಾಪನ್ನು ಮೂಡಿಸಿರಬಹುದು. ಕೆಲವರಿಗೆ ಈ ವರ್ಷ ಹರ್ಷವನ್ನು ಇನ್ನು ಕೆಲವರಿಗೆ ಸಂಕಷ್ಟವನ್ನು ತಂದಿರಬಹುದು. ಏಳು ಬೀಳಿನ ಸುತ್ತ ಹೆಜ್ಜೆ ಹಾಕುವ ಜೀವನಕ್ಕೆ ಇದೆಲ್ಲಾ ಮಾಮೂಲಿ ಎಂದು ನೆನೆಯಬೇಕು.
ಈ ವರ್ಷ ನನ್ನ ಜೀವನದಲ್ಲಿ ಸಂತಸದ ಸಮಯವನ್ನು ಜಾಸ್ತಿಯೇ ಕಳೆದಿದ್ದೇನೆ ಹಾಗೆಯೇ ತುಸು ಬೇಸರ ಮೂಡಿದ ಸನ್ನಿವೇಶಗಳು ಎದುರಾಗಿದ್ದು ಇದೆ . ಮೊದಲು ಖುಷಿಯ ವಿಚಾರ ನಿಮ್ಮಲ್ಲಿ ಹಂಚಿಕೊಳ್ಳುವ ಖಾತರ . ಯಾವುದೇ ವಿದ್ಯಾರ್ಥಿ ಯಾಗಲಿ ಆತ ಶಿಕ್ಷಣವನ್ನು ಕಲಿಯುವ ಸಮಯದಲ್ಲಿ ಏನಾದರೂ ಸಾಧನೆ ಮಾಡಬೇಕೆನ್ನುವ ಹಂಬಲ ಇರುತ್ತದೆ . ಹಾಗೆಯೇ ನಾನು ಉನ್ನತ ಶಿಕ್ಷಣ ಪಡೆದ ಮೇಲೆ ವಿ ವಿ ಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ಚಿನ್ನದ ಪದಕದೊಂದಿಗೆ ತೇರ್ಗಡೆಯನ್ನು ಹೊಂದಿದೆ. ಈ ಕ್ಷಣ ನಿಜಕ್ಕೂ ಅದ್ಭುತವೇ ಸರಿ. ಅಪ್ಪ ಅಮ್ಮನ ಕಣ್ಣಿನಲ್ಲಿ ಅದೇನೋ ಖುಷಿಯನ್ನು ನಾನು ನೋಡಿದೆ. ಬಾಲ್ಯದಲ್ಲಿ ನಿನ್ನ ಮಗ ಕಲಿಯುತ್ತಿಲ್ಲ ಎಂದ ಸಮಾಜದ ಮುಂದೆ ನಾನು ಈ ರೀತಿ ಎದ್ದು ನಿಂತದ್ದು ಹೆತ್ತವರಿಗೆ ಹೆಮ್ಮೆಯನ್ನೇ ತಂದಿದ್ದು. ಆಡಿಕೊಳ್ಳುವವರ ಬಾಯಿಯ ಮುಂದೆ ಬಾಯಿ ಬಿಡುವಂತೆಯೇ ಮಾಡಿತ್ತು.
ಇನ್ನು ತುಸು ಬೇಸರದ ಸಂಗತಿ ಎಂದರೆ ಕಾಲೇಜು ಜೀವನಕ್ಕೆ ವಿದಾಯ ಹಾಡಿ ಉದ್ಯೋಗ ಪುರುಷ ಲಕ್ಷಣ ಎನ್ನುವ ಬ್ಯಾನರ್ ಅಡಿಯಲ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದು. ಅದುವರೆಗೂ ಕಾಲೇಜು ಕಲಿಕೆ ಗೆಳೆಯರು, ಇನ್ನು ಹೆಗಲ ಮೇಲೆರದ ಜವಾಬ್ದಾರಿಗಳು ಹೀಗೆ ಸಂತಸದಿಂದ ಇದ್ದೆ ಆದರೆ ಯಾವಾಗ ಕಾಲೇಜು ಜೀವನ ಮುಗಿಯಿತ್ತೋ ಆ ಕ್ಷಣ ತಿಳಿಯಿತು ಜೀವನ ಅಂದ್ರೆ ಹೀಗೇನಾ…..?! ಬದುಕು ಅಂದ್ರೆ ಹಣವೇನಾ. ಸಂಬಂಧಗಳು ಅಂದ್ರೆ ಇಷ್ಟೇನಾ ಎಂದು ಒಂದರ ಮೇಲೆ ಒಂದರಂತೆ ಯೋಚನೆಗಳ ಪ್ರವಾಹವೇ ಹರಿಯಲು ಶುರುವಾಗುತ್ತದೆ. ಅದು ಏನೇ ಇರಲಿ ಕಾಲದ ಮಹಿಮೆಯ ಮುಂದೆ ತಲೆ ಬಾಗಲೇ ಬೇಕು ತಾನೇ.
ಈ ವರ್ಷ ನೆರವೇರದ ಯೋಜನೆಗಳು, ಈಡೇರದ ಆಲೋಚನೆಗಳ ಈಡೇರಿಕೆಯತ್ತ ಗಮನವನ್ನು ಹರಿಸಿ. ಈಡೇರುವ ಮಾರ್ಗದತ್ತ ಹೆಜ್ಜೆ ಹಾಕಿ. ಇಡುವ ಹೆಜ್ಜೆ ಸಣ್ಣದಾದರೂ ಅದು ಮುಂದೊಂದು ದಿನ ಯಶಸ್ಸಿನ ಕಥೆಯಾಗಬಹುದು . ಕೆಲವರಿಗೆ ಈ ವರ್ಷ ಹರ್ಷವನ್ನು ಕೊಡದೇ ಇರಬಹುದು ಆದರೆ ಬರುತ್ತಿರುವ ವರ್ಷ ಹರ್ಷವನ್ನು ನಿಜಕ್ಕೂ ತರುವುದು.
ಗಿರೀಶ್ ಪಿಎಂ
ಕಾಸರಗೋಡು