ಶ್ರೀನಗರ: ಪ್ರವಾಸಿಗರು ಮತ್ತು ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಿಂದ ತುಂಬಿ ತುಳುಕುತ್ತಿದ್ದ ಜಮ್ಮು-ಕಾಶ್ಮೀರದ ನೆಚ್ಚಿನ ಪಹಲ್ಗಾಮ್ ಪ್ರವಾಸಿ ತಾಣ ಕಳೆದ ಮಂಗಳವಾರ ನಡೆದ ಭಯೋತ್ಪಾದಕ ದಾಳಿಗೆ ಅಕ್ಷರಶಃ ನಲುಗಿ ಹೋಗಿದೆ. ಸ್ಥಳೀಯರೊಬ್ಬರು ಸೇರಿದಂತೆ ಕನಿಷ್ಠ 26 ಜನರು ಮೃತಪಟ್ಟು ಭೂಲೋಕದ ಸ್ವರ್ಗದಂತಿದ್ದ ಪ್ರದೇಶ ಈಗ ನೀರವ ಮೌನವಾಗಿದೆ.
ಇಲ್ಲಿ ಯಾವಾಗಲೂ ಪ್ರವಾಸಿಗರು ತುಂಬಿತುಳುಕುತ್ತಿದ್ದರಿಂದ ಊಟ ಮತ್ತು ಇತರ ತಿಂಡಿ ತಿನಿಸುಗಳ ಹೊಟೇಲ್ ಮಾಲೀಕರಿಗೆ, ಡಬ್ಬಾವಾಲಾಗಳಿಗೆ ಬಿಡುವಿಲ್ಲದ ಕೆಲಸವಿತ್ತು. ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಈಗ ಪ್ರವಾಸಿಗರಿಲ್ಲದೆ ಬಣಗುಡುತ್ತಿದ್ದು, ಹೊಟೇಲ್, ಡಬ್ಬಾವಾಲಾಗಳ ಭವಿಷ್ಯ ಕತ್ತಲೆಯಲ್ಲಿದೆ.
ಬಹು ಬೇಡಿಕೆಯ ಪ್ರವಾಸಿ ತಾಣವಾದ ಪಹಲ್ಗಾಮ್ ಭೂತದ ಪಟ್ಟಣದಂತೆ ಕಾಣುತ್ತಿತ್ತು, ಭದ್ರತಾ ಪಡೆಗಳ ಚಲನೆ ಮತ್ತು ಸಾಂದರ್ಭಿಕವಾಗಿ ಖಾಸಗಿ ವಾಹನಗಳು ಮತ್ತು ಕ್ಯಾಬ್‌ಗಳ ಓಡಾಟ ಮಾತ್ರ ಕಾಣುತ್ತಿದೆ. ಎಲ್ಲಾ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟಿವೆ.