ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯ ಮಾಡುವುದು ಭಾಷಾ ಸ್ವಾತಂತ್ರ್ಯದ ಮೇಲಿನ ದಾಳಿ : ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:ಕೇರಳದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸಲು ಕೇರಳ ಸರ್ಕಾರ ಹುನ್ನಾರ ನಡೆಸುತ್ತಿದ್ದು ಇದೀಗ . ‘ಮಲೆಯಾಳಿ ಭಾಷಾ ಮಸೂದೆ-2025’ಯನ್ನು ಪ್ರಸ್ತಾಪಿಸಿದೆ. ಈ ಮಸೂದೆಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ‌ ವಿಜಯನ್ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. “ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವುದು ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ” ಎಂದಿದ್ದಾರೆ.

“ಸರ್ಕಾರದ ನೀತಿಯಿಂದ ಕೇರಳದ ಗಡಿಜಿಲ್ಲೆಗಳಲ್ಲಿ, ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯಲ್ಲಿ ಶಿಕ್ಷಣ ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡಲಿದೆ. ಇಂತಹ ನಡೆಯನ್ನು ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ” ಎಂದಿದ್ದಾರೆ.

“ಕಾಸರಗೋಡು ಆಡಳಿತಾತ್ಮಕವಾಗಿ ಕೇರಳಕ್ಕೆ ಸೇರಿದ್ದರೂ, ಭಾವನಾತ್ಮಕವಾಗಿ ಕರ್ನಾಟಕಕ್ಕೆ ಸೇರಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ, ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!