ಉಡುಪಿ: ಕರಾವಳಿ, ಮಲೆನಾಡು ಭಾಗದ ಪ್ರಮುಖ ಕಲೆಗಳಲ್ಲಿ ಒಂದಾದ ಯಕ್ಷಗಾನ ತಾಳಮದ್ದಲೆ ಹಾಗೂ ತಾಳಮದ್ದಲೆ ಅರ್ಥಧಾರಿಗಳ ಕುರಿತಂತೆ ಅವಹೇಳನ, ಲೇವಡಿ, ಅಪಮಾನದ ಮಾತುಗಳನ್ನು ಸತತವಾಗಿ ತಮ್ಮ ಮಾಧ್ಯಮಗಳಲ್ಲಿ ಬರೆಯುತ್ತಿರುವ ಹಿರಿಯ ಪತ್ರಕರ್ತ, ಸಂಪಾದಕ ವಿಶ್ವೇಶ್ವರ ಭಟ್ಟದ ನಡೆಗೆ ತಾಳಮದ್ದಲೆ ಕಲಾವಿದರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಭಟ್ಟರು ತಕ್ಷಣ ಈ ಬಗ್ಗೆ ಕ್ಷಮಾಪಣೆ ಕೇಳಿ, ವಿವಾದಕ್ಕೆ ಇತಿಶ್ರೀ ಹಾಡಬೇಕೆಂದು ಒಕ್ಕೊರನಿಂದ ಆಗ್ರಹಿಸಿದ್ದಾರೆ.
ವಿಶ್ವೇಶ್ವರ ಭಟ್ಟರು ಕಳೆದ ಕೆಲ ಸಮಯದಿಂದ ತಮ್ಮ ಮಾಧ್ಯಮಗಳಲ್ಲಿ ತಾಳಮದ್ದಲೆ ಕಲಾವಿದರ ಕುರಿತಂತೆ ನಡೆಸುತ್ತಿರುವ ಅವಹೇಳನದ ಅಭಿಯಾನವನ್ನು ಖಂಡಿಸಿ ಹಿರಿಯ ತಾಳಮದ್ದಲೆ ಅರ್ಥಧಾರಿ ಹಾಗೂ ಘನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ನೇತೃತ್ವದಲ್ಲಿ 13 ಮಂದಿ ಕಲಾವಿದರು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಹಿರಿಯ ಅರ್ಥಧಾರಿ ವಾಸುದೇವ ರಂಗಭಟ್ಟ ಅವರು, ವಿಶ್ವೇಶ್ವರ ಭಟ್ಟರು ತಮ್ಮ ಪತ್ರಿಕೆಯ ಪ್ರಶೋತ್ತರ ಅಂಕಣವಾದ ‘ಭಟ್ಟರ ಸ್ಕಾಚ್’ನಲ್ಲಿ ತಾಳಮದ್ದಲೆ ಅರ್ಥಧಾರಿಗಳಲ್ಲೇ ಅತಿ ಹಿರಿಯರಾದ ಹಾಗೂ ಪ್ರಪ್ರಥಮ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾದ ಡಾ.ಎಂ.ಪ್ರಭಾಕರ ಜೋಷಿ ಅವರ ಹಿರಿತನ, ಜ್ಞಾನ, ಅನುಭವಗಳನ್ನು ಪರಿಹಾರ ಮಾಡುತ್ತಾ ಲೇವಡಿಯ ಮಾತುಗಳ ಮೂಲಕ ಈ ಅಭಿಯಾನವನ್ನು ಪ್ರಾರಂಭಿಸಿದ್ದರು ಎಂದರು.
ಈ ಬಗ್ಗೆ ತಾವು, ವಿದ್ವಾಂಸರಾದ ಶಿರಸಿಯ ಕೆ. ಉಮಾಕಾಂತ ಭಟ್ಟ ಮತ್ತು ಉಜಿರ ಅಶೋಕ್ ಭಟ್ಟರು ಸಂಯಮ ಪೂರ್ಣ, ಸಾತ್ವಿಕ ಪ್ರತಿಭಟನಾ ಪ್ರತಿಕ್ರಿಯೆ ನೀಡಿದ್ದು ಇದನ್ನು ವೈಯಕ್ತಿಕ ನೆಲೆಯಲ್ಲಿ ತೆಗೆದುಕೊಂಡ ಭಟ್ಟರು ತಾಳಮದ್ದಲೆ ಕಲಾವಿದರೆಲ್ಲರ ಮೇಲೂ ತಮ್ಮ ಪತ್ರಿಕೆಯ ಮೂಲಕ ವೈಯಕ್ತಿಕ ದಾಳಿ ನಡೆಸಲಾರಂಭಿಸಿದರು. ತಾಮದ್ದಲೆ ಅರ್ಥಧಾರಿಗಳನ್ನು ‘ಐಟಮ್ ಸಾಂಗ್ ಡ್ಯಾನ್ಸರ್ ಎಂದು ಕರೆಯುವ ಮಟ್ಟಕ್ಕೂ ಹೋದರು ಎಂದವರು ವಿಷಾಧಿಸಿದರು.
ಡಾ.ಎಂ.ಪ್ರಭಾಕರ ಜೋಷಿ ಮಾತನಾಡಿ, ತಾಳಮದ್ದಲೆ ಕಲಾವಿದರನ್ನು ವಿಶ್ವೇಶ್ವರ ಭಟ್ಟರು ಸತತವಾಗಿ ಲೇವಡಿ ಮಾಡಿ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಾವು ಕಲಾವಿದರೆಲ್ಲ ಸೇರಿ ಪತ್ರಿಕಾಗೋಷ್ಠಿ ಮೂಲಕ ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದೇವೆ. ಭಟ್ಟರ ಈ ಅಭಿಯಾನದ ವಿರುದ್ಧ ನಾಡಿನಾದ್ಯಂತರಿಂದ ಹಾಗೂ ಹೊರನಾಡಿನಿಂದಲೂ ನಮಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ವಿಶ್ವೇಶ್ವರ ಭಟ್ಟರು ಯಾಕಾಗಿ ನನ್ನ ವಿರುದ್ಧ ಲೇವಡಿಯ ಮಾತುಗಳನ್ನು ಬರೆದರು ಎಂದು ನನಗೆ ಗೊತ್ತಿಲ್ಲ. ಅತ್ಯಂತ ದುಃಖಕರ ಸನ್ನಿವೇಶದಲ್ಲಿ ನಾವು ಈ ಪ್ರತಿಕ್ರಿಯೆ ನೀಡುತಿದ್ದೇವೆ. ಕಲೆ, ಕಲಾವಿದರ ಕುರಿತ ಅವರ ಹೇಳಿಕೆಗಳನ್ನು ಖಂಡಿಸುತ್ತಾ ಅವರು ತಮ್ಮ ಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಲೇ ಬೇಕು. ಇಲ್ಲದಿದ್ದರೆ ನಾವು ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ ಎಂದರು.
ತಾಳಮದ್ದಲೆ ಕಲಾವಿದರ ಬೇಡಿಕೆಗಳು:
ತಮ್ಮ ಅಬದ್ಧ ಬರಹಕ್ಕೆ ಹಾಗೂ ಅರ್ಧಧಾರಿಗಳ ಕುರಿತಾದ ಮಾನಹಾನಿಕರ ಹೇಳಿಕೆಗಳಿಗೆ ವಿಶ್ವೇಶ್ವರ ಬಟ್ಟರು ಸಾರ್ವಜನಿಕವಾಗಿ ತಮ್ಮ ಪತ್ರಿಕೆಯಲ್ಲೇ ಅರ್ಥಧಾರಿಗಳ, ಕಲಾಭಿಮಾನಿಗಳ ಕ್ಷಮೆ ಕೋರಬೇಕು.
ಅವರ ಅಂಕಣದಲ್ಲಿ ಹಾಸ್ಯ ಬರಹದ ಹೆಸರಿನಲ್ಲಿ ತಾಳಮದ್ದಲೆ ಅರ್ಥಧಾರಿಗಳ ತೇಜೋವಧೆ ಮಾಡುವುದನ್ನು ಇಲ್ಲಿಗೆ ನಿಲ್ಲಿಸಿ, ಮುಂದೆ ತಮ್ಮ ಪತ್ರಿಕೆಯಲ್ಲಿ ಇಂತಹ ಅನುಚಿತ ವರ್ತನೆಯನ್ನು ಮುಂದುವರಿಸುವುದಿಲ್ಲ ಎಂಬ ಬದ್ಧತೆಯನ್ನು ವ್ಯಕ್ತಪಡಿಸಬೇಕು.
ಇನ್ನು ಮುಂದೆ ಈ ಕಲೆಯನ್ನು ಗೌರವಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಾ ಕಲಾವಿದರ ಆತ್ಮಗೌರವಕ್ಕೆ ಚ್ಯುತಿಯುಂಟು ಮಾಡಿದ ತನ್ನ ಪ್ರವೃತ್ತಿಯನ್ನು ತಿದ್ದಿಕೊಳ್ಳಬೇಕು ಎಂದು ಕಲಾವಿದರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ತಾಳಮದ್ದಲೆ ಕಲಾವಿದರಾದ ಸರ್ವಂಗಳ ಈಶ್ವರ ಭಟ್ಟ, ವಿ.ಉಮಾಕಾಂತ ಭಟ್ಟ, ವಿ.ಹಿರಣ್ಯ ವೆಂಕಟೇಶ ಭಟ್ಟ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಉಜಿರೆ ಅಶೋಕ ಭಟ್ಟ, ರಾಧಾಕೃಷ್ಣ ಕಬ್ಬಾರ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಹರೀಶ್ ಬಳಂತಿ ಮುಗರು, ಡಾ.ಪ್ರದೀಪ್ ಸಾಮಗ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಪವನ್ ಕಿರಣ್‌ರೆ, ದಿನೇಶ್ ಶೆಟ್ಟಿ ಕಾವಳಕಟ್ಟಿ ಉಪಸ್ಥಿತರಿದ್ದರು.