ಉಡುಪಿ: ನಡುರಸ್ತೆಯಲ್ಲೇ ವಿದ್ಯಾರ್ಥಿಗಳು ಕುಣಿದು, ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿದೆ.
ಕೇರಳದಿಂದ ಉಡುಪಿ ಕಡೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಎರಡು ಬಸ್‌ಗಳಲ್ಲಿ ಆಗಮಿಸಿದ್ದರು. ಈ ವೇಳೆ ಟೋಲ್ ಗೇಟ್ ಬಳಿ ಬಸ್‌ಗಳನ್ನು ನಿಲ್ಲಿಸಿ, ವಿದ್ಯಾರ್ಥಿಗಳು ರಸ್ತೆಯ ಮಧ್ಯದಲ್ಲೇ ಕುಣಿದು, ಪಟಾಕಿ ಸಿಡಿಸಿ ಹುಚ್ಚಾಟ ನಡೆಸಿದರು. ಈ ಕಾರಣದಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾದುದಾಗಿ ತಿಳಿದು ಬಂದಿದೆ.
ವಿದ್ಯಾರ್ಥಿಗಳ ಈ ಪುಂಡಾಟದ ದೃಶ್ಯಗಳು ಸಾರ್ವಜನಿಕರು ಸೆರೆಹಿಡಿದ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಘಟನೆ ಕುರಿತು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಮುಂದಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.