ಮಂಗಳೂರು: ಪಂಪ್ ವೆಲ್ ನಿಂದ ಹಳೆಯ ಪೋಸ್ಟ್ ಆಫೀಸ್ ವರೆಗಿನ ರಸ್ತೆ ಅಗಲೀಕರಣದ ಕುರಿತಂತೆ ಶಾಸಕ ವೇದವ್ಯಾಸ ಕಾಮತ್ ರವರು ಕಂಕನಾಡಿಯ ಫಾದರ್ ಮುಲ್ಲರ್ ಆಡಳಿತ ಮಂಡಳಿಯ ಪ್ರಮುಖರೊಂದಿಗೆ ನಡೆಸಿದ ಸಭೆಯು ಫಲಪ್ರದವಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕರು, ಇಲ್ಲಿನ ರಸ್ತೆ ಅಗಲೀಕರಣವು ಮಂಗಳೂರಿನ ನಾಗರಿಕರ ಹಲವಾರು ವರ್ಷಗಳ ಬೇಡಿಕೆಯಾಗಿದ್ದು ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಪ್ರೀಮಿಯರ್ ಎಫ್ ಐ ಆರ್ ನಲ್ಲಿ ಸುಮಾರು ನಾಲ್ಕು ಕೋಟಿ ಅನುದಾನವನ್ನು ಮಂಜೂರುಗೊಳಿಸಲಾಗಿತ್ತು. ರಸ್ತೆಗಳು ಅಗಲವಾದಲ್ಲಿ ಕಂಕನಾಡಿಗೆ ಬರುವ ರೋಗಿಗಳ ಸಹಿತ ಸುತ್ತಮುತ್ತಲಿನ ಎಲ್ಲಾ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ನಗರದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಫಾದರ್ ಮುಲ್ಲರ್ ಆಸ್ಪತ್ರೆಯವರು ಸುಮಾರು 20 ಸೆನ್ಸ್ ಗೂ ಅಧಿಕ ಜಾಗ ಬಿಟ್ಟು ಕೊಡುವುದು ಅನಿವಾರ್ಯವಾಗಿದ್ದು, ಟಿ.ಡಿ.ಆರ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಾವು ಮಾಡಿದ ಮನವಿಗೆ ಒಪ್ಪಿಕೊಂಡಿರುವುದಕ್ಕೆ ಆಡಳಿತ ಮಂಡಳಿಗೆ ವಿಶೇಷ ಧನ್ಯವಾದಗಳು ಎಂದರು.
ಇಲ್ಲಿಗೆ ಸರ್ಕಾರದ ನಿಯಮಗಳನುಸಾರ ಎಲ್ಲಾ ರೀತಿಯ ಪರಿಹಾರ ಸಹಿತ ಶೀಘ್ರದಲ್ಲಿ ಕಾಂಪೌಂಡ್ ಕಟ್ಟಿ ಕೊಡುವ ಕೆಲಸದ ಜೊತೆಗೆ ಹಿಂದೆ ಮಂಜೂರಾದ ಅನುದಾನದಿಂದ ರಸ್ತೆ ಅಗಲೀಕರಣ ಕಾರ್ಯವು ಸಾಕಾರಗೊಳ್ಳಲಿದೆ ಎಂದರು. ಫಾದರ್ ಮುಲ್ಲರ್ ಆಡಳಿತ ಮಂಡಳಿಯ ನಿರ್ದೇಶಕರಾದ ರೆವ್. ಫಾದರ್ ಫಾಸ್ಟಿನ್ ಲುಕಾಸ್ ಲೋಬೋ, ಫಾದರ್ ಜೀವನ್, ಫಾದರ್ ಮೈಕಲ್, ಗಿರಿಯಪ್ಪ, ನಿಕಟ ಪೂರ್ವ ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ನವೀನ್ ಡಿಸೋಜ, ಜೆ.ಇ ಭವ್ಯ, ನಗರ ಯೋಜನಾಧಿಕಾರಿ ಶರತ್ ಗೌಡ, ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಾಜ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.