ಮಂಗಳೂರು: ರಾಷ್ಟ್ರ ಮಟ್ಟದ ಸರಸ್ ಮೇಳಕ್ಕೆ ಭಾರಿ ಸಂಖ್ಯೆಯಲ್ಲಿ ಜನರ ಪ್ರತಿಕ್ರಿಯೆ ನಿರೀಕ್ಷೆ ಮಾಡಿದ್ದ ಆಯೋಜಕರಿಗೆ ಕರಾವಳಿಯ ಮಂಗಳೂರಿನಲ್ಲಿ ನಿರಾಶೆಯ ಛಾಯೆ ಮೂಡಿದೆ. ಕಳೆದ 8 ದಿನಗಳಿಂದ ನಡೆಯುತ್ತಿರುವ ಸರಸ್ ಮೇಳಕ್ಕೆ ಮುಗಿ ಬೀಳಬೇಕಿದ್ದ ಜನರಿಂದ ನೀರಸ ಪ್ರತಿಕ್ರಿಯೆ ಉಂಟಾಗಿದೆ. ಇನ್ನು ಕೆಲ ಸ್ವಸಹಾಯ ಗುಂಪಿನ ಮಹಿಳಾ ವ್ಯಾಪಾರಿಗಳು ಕೈತುಂಬ ವ್ಯಾಪಾರ ಆಗದೇ ಕೈ ಸುಟ್ಟುಕೊಂಡಿದ್ದಾರೆ.
ಕೆಲ ವ್ಯಾಪಾರಿಗಳು ಇಡೀ ದಿನ ವ್ಯಾಪಾರ ಮಾಡಿದರೂ ಆಹಾರ, ತಿಂಡಿ ತಿನಿಸುಗಳು ಮಾರಾಟ ಆಗದೇ ಇರುವುರಿಂದ ಬಿಸಾಡುವಂತಹ ಅಪರೂಪದ ಘಟನೆಗಳು ಕೂಡ ನಡೆಯುತ್ತಿವೆ. ದೇಶದ 15 ರಾಜ್ಯಗಳಿಂದ ಹುಮ್ಮಸ್ಸಿನಿಂದ ಬಂದಿದ್ದ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳಾ ವ್ಯಾಪಾರಿಗಳು ಉತ್ಪನ್ನಗಳನ್ನು ಸರಿಯಾಗಿ ಮಾರಾಟ ಮಾಡಲು ಆಗದೇ ನಿರಾಶೆ ಉಂಟಾಗಿದೆ.
ಸರಕಾರ ಸುಮಾರು 2.50 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಮಾಡುತ್ತಿರುವ ಈ ಸರಸ್ ಮೇಳಕ್ಕೆ ಕರಾವಳಿ ಭಾಗದ ಮಂಗಳೂರಿಗರೂ ಅಷ್ಟೊಂದು ಒಲವು ತೋರಿಸಿಲ್ಲ ಎಂದೇ ಹೇಳಲಾಗುತ್ತಿದೆ. ರಾಷ್ಟ್ರ ಮಟ್ಟದ ಸರಸ್ ಮೇಳವೂ ಸರಿಯಾಗಿ ಜನರನ್ನು ಮುಟ್ಟದೇ ಇರುವುರಿಂದ ಈ ರೀತಿಯ ವಾತಾವರಣ ಉಂಟಾಗಿದೆ ಎಂದು ಸರಸ್ ಮೇಳಕ್ಕೆ ಬಂದಿದ್ದ ಬಹುತೇಕರ ಅಭಿಪ್ರಾಯ.
ಮಹಿಳೆಯರಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಆರ್ಥಿಕ ಸ್ವಾಲಂಬನೆ ಮೂಡಿಸುವ ಉದ್ದೇಶದಿಂದ ನಡೆಯುತ್ತಿರುವ ಸರಸ್ ಮೇಳದಲ್ಲಿ ಸಾಕಷ್ಟು ದೂರದ ಊರುಗಳಿಂದ ಬಂದಿರುವ ವ್ಯಾಪಾರಿಗಳು ತಕ್ಕಮಟ್ಟಿಗಾದರೂ ವ್ಯಾಪಾರ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರೂ. ಆದರೆ ಇದ್ಯಾವುದು ನಡೆಯದೇ ಇರುವುದರಿಂದ ಹಾಕಿದ ಬಂಡವಾಳವೂ ಬಾರದೇ ಇರುವ ಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ.
ಸರಸ್ ಮೇಳದಲ್ಲಿ 30 ಫುಡ್ ಕೋರ್ಟ್ ಹಾಗೂ 100 ಕ್ಕೂ ಅಧಿಕ ಸ್ಟಾಲ್ ಗಳನ್ನು ಹಾಕಲಾಗಿದೆ. ಚನ್ನಪಟ್ಟಣದ ಗೊಂಬೆಗಳು, ಸೌಂದರ್ಯ ವಸ್ತುಗಳು, ಅಸ್ಸಾಂ, ತೆಲಂಗಾಣ, ಆಂಧ್ರಪ್ರದೇಶದ ಸೀರೆಗಳು, ಕೈ ಮಗ್ಗ ಸೀರೆಗಳು, ಸಿರಿಧಾನ್ಯ ಉತ್ಪನ್ನಗಳು, ಯುವತಿಯರ ಕಣ್ಣು ಕುಕ್ಕಿಸುವ ಆಕರ್ಷಕ ಕಿವಿಯೋಲೆಗಳು, ಮಣಿ ಸರಗಳು, ಖಾದಿ ಉತ್ಪನ್ನ, ಕೃತಕ ಆಭರಣಗಳು, ಮಡಿಕೆಗಳು ಮಾರಾಟ ಮತ್ತು ಪ್ರದರ್ಶನಕ್ಕಿಡಲಾಗಿದೆ. ಇನ್ನು ಫುಡ್ ಕೋರ್ಟ್ ಗಳಲ್ಲಿ ಒಂದಕ್ಕಿಂತ ಹೆಚ್ಚು ಒಂದೇ ತರಹದ ಖಾದ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ದಿನ ದಿನಕ್ಕೆ ದರಗಳಲ್ಲಿ ಏರಿಳಿತ ಕಂಡು ಬರುತ್ತಿದೆ.
ಅಕ್ಕ ಕೆಫೆಯ ತಿನಿಸುಗಳಿಗೆ ನಿರಾಸಕ್ತಿ: ಅಕ್ಕ ಕೆಫೆಯ ಮಹಿಳೆಯರು ತರಹೇವಾರಿ ತಿನಿಸುಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮೀನು, ಚಿಕನ್ ಸುಕ್ಕ ರಾಗಿ ಮುದ್ದೆ ರಾಜಸ್ಥಾನದ ಸಿಹಿ ತಿನಿಸುಗಳು ನೀರ್ ದೋಸೆ ಚಾಟ್ಸ್, ಜ್ಯೂಸ್, ಹಲಸಿನ ಹಲ್ವ ಹಲಸಿನ ಗಟ್ಟಿ, ಪಾಯಸ ಮುಳ್ಕ ಜನರನ್ನು ಸೆಳೆಯುವಲ್ಲಿ ಅಷ್ಟೇನು ಯಶಸ್ಸು ಕಂಡಿಲ್ಲ.
ಆಯೋಜಕರು ಒಟ್ಟು 9 ದಿನಗಳ ಕಾಲ ನಡೆವ ಸರಸ್ ಮೇಳದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ವ್ಯಾಪಾರ ವಹಿವಾಟು ಆಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸ್ಟಾಲ್ ಹಾಗೂ ಫುಟ್ ಕೋರ್ಟ್ ಗಳಿಂದ ಒಟ್ಟು 96.06 ಲಕ್ಷ ದಷ್ಟು (ಫೆ. 26 ರವರಿಗೆ) ವ್ಯಾಪಾರ ವಹಿವಾಟು ಆಗಿದ್ದು, ಒಟ್ಟು ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ಮೇಳಕ್ಕೆ ನೀಡಿದ್ದಾರೆ. ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನರೇ ಬಾರದ ಸ್ಥಿತಿ ಇದೆ. ಆಯೋಜಕರೇ ಚಪ್ಪಾಳೆ, ಸಿಳ್ಳೆ ಹಾಕುವ ಸ್ಥಿತಿ ಇದೆ.
8 ದಿನಗಳಿಂದ ನಿರೀಕ್ಷೆ ಮಾಡಿದಷ್ಟು ವ್ಯಾಪಾರ ಆಗುತ್ತಿಲ್ಲ, ಹಾಕಿದ ಬಂಡವಾಳ ಕೂಡ ಬಾರದೇ ಇರುವ ಸ್ಥಿತಿ ಇದೆ. ನಮ್ಮ ಊರುಗಳಲ್ಲಿ ದಿನವೊಂದಕ್ಕೆ 15 ಸಾವಿರಕ್ಕೂ ಹೆಚ್ಚು ವ್ಯಾಪಾರ ಮಾಡುತ್ತಿದ್ದೇವು. ಆದರೆ, ಇಲ್ಲಿ 2 ಸಾವಿರ ವ್ಯಾಪಾರ ಕೂಡ ಆಗುತ್ತಿಲ್ಲ. ಜನರು ಬಾರದೇ ಇರುವುದರಿಂದ ವ್ಯಾಪಾರ ಆಗದೇ ಇರುವುದರಿಂದ ತಿಂಡಿ ತಿನಿಸು ಬಿಸಾಡುತ್ತಿದ್ದೇವೆ ಎಂದು ಮೇಳದಲ್ಲಿ ಆಹಾರ ಖಾದ್ಯ ಮಾರಾಟ ಮಾಡುವ ಸ್ವ ಸಹಾಯ ಗುಂಪಿನ ಮಹಿಳಾ ವ್ಯಾಪಾರಿ ನೊಂದು ಹೇಳಿದರು.
ಮೂರು ಕೆ.ಜಿ ಅಕ್ಕಿಯಿಂದ ತಯಾರು ಮಾಡಿದ್ದ ಓಡಿಶಾ ದಮ್ಮ ಬಿರಿಯಾನಿಗೆ ಜನರೇ ಇಲ್ಲ. ಬೆಳ್ಳಿಗೆ ಮಾಡಿದ ಬಿರಿಯಾನಿ ಮೂರು ಪ್ಲೇಟ್ ಕೂಡ ಮಾರಿಲ್ಲ. ವ್ಯಾಪಾರವೇ ಇಲ್ಲ. ಮಧ್ಯಾಹ್ನ ಬಿರಿಯಾನಿ ಬಿಸಾಡಿದ್ದೇವೆ. ಸಂಜೆ ಮಾಡಿದ ಖಾದ್ಯಕ್ಕೂ ಜನರು ರೆಸ್ಫಾನ್ಸ್ ಮಾಡುತ್ತಿಲ್ಲ. ಪ್ರಚಾರದ ಕೊರತೆಯಿಂದ ಜನರು ಮೇಳಕ್ಕೆ ಬಂದಿಲ್ಲ ಎಂದು ಹೇಳಲಾಗುತ್ತಿದೆ ಎಂದು ದಮ್ಮ ಬಿರಿಯಾನಿ ಮಹಿಳಾ ವ್ಯಾಪಾರಿ ತಿಳಿಸಿದರು.
ಇಷ್ಟು ದೊಡ್ಡ ಮಟ್ಟದ ಸರಸ್ ಮೇಳಕ್ಕೆ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ. ಬಿಸಿಲು ಹೆಚ್ಚಾಗಿರುವ ಕಾರಣಕ್ಕೆ ಮೇಳಕ್ಕೆ ಸ್ಪಂದನೆ ಸಿಗುತ್ತಿಲ್ಲ. ಮಹಿಳೆಯರನ್ನು ಆಕರ್ಷಣೆ ಮಾಡುವಲ್ಲಿ ಮೇಳದ ಆಯೋಜಕರು ಸಂಪೂರ್ಣ ಎಡವಿದ್ದಾರೆ. ಕರಾವಳಿ ಭಾಗದ ಜನರ ನಾಡಿಮಿಡಿತ ಅರಿಯುವಲ್ಲಿ ಮೇಳ ಸಂಪೂರ್ಣ ವಿಫಲ ಆಗಿದೆ. ಸ್ಥಳೀಯ ಮಟ್ಟದ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡಬೇಕಾಗಿತ್ತು. ಸ್ಥಳೀಯರಿಗೆ ವ್ಯಾಪಾರ ವಹಿವಾಟಿಗೆ ಒತ್ತು ಸಿಗಬೇಕಿತ್ತು. ಇಷ್ಟು ದೊಡ್ಡ ಮೊತ್ತದ ಅನುದಾನದಲ್ಲಿ ನಡೆಯುವ ಮೇಳಕ್ಕೆ ಜನರೇ ಇಲ್ಲದೇ ಇದ್ದರೆ ಮೆರುಗು ಬರುವುದಿಲ್ಲ. ಇನ್ನು ಮುಂದೇ ಇಂತಹ ಮೇಳಗಳನ್ನು ಆಯೋಜನೆ ಮಾಡುವಾಗ ಪೂರ್ವ ಸಿದ್ದತೆ ಅಗತ್ಯ ಎಂದು ಮೇಳ ನೋಡಲು ಬಂದಿದ್ದ ರಾಜೇಶ್ ಅವರು ಹೇಳಿದರು.
ಚಾಟ್ಸ್, ಮಿರ್ಜಿ ಬಜಿ, ಪಾನೀ ಪೂರಿ ವ್ಯಾಪಾರವೂ ಅಷ್ಟಕಷ್ಟೇ. ಒಟ್ಟು 11 ಸಾವಿರ ಪೂರಿ ತರಲಾಗಿತ್ತು ಅದರಲ್ಲಿ 6 ಸಾವಿರ ಪೂರಿ ಮಾರಾಟ ಮಾಡಿದ್ದೇವೆ. ಇನ್ನೂ ಕೂಡ 5 ಸಾವಿರದಷ್ಟು ಪೂರಿ ಹಾಗೇಯೇ ಉಳಿದಿದೆ. ಫೆ 28 ಕ್ಕೆ ಕೊನೆಯ ದಿನ, ಆ ದಿನ ಆದರೂ ವ್ಯಾಪಾರ ಆಗುತ್ತೆ ಎನ್ನುವ ನಿರೀಕ್ಷೆ ಇದೆ ಎಂದು ಚಾಟ್ಸ್ ಮಹಿಳಾ ವ್ಯಾಪಾರಿ ತಿಳಿಸಿದರು.
ಬಿಸಿಲಿನಿಂದಾಗಿ ಜನ ಬರ್ತಿಲ್ಲ
ಬಿಸಿಲಿನಲ್ಲಿ ಜನರು ಬರುತ್ತಿಲ್ಲ, ಆದರೆ ವ್ಯಾಪಾರ ಆಗಿದೆ. ಬೆಳಗಾವಿಯಲ್ಲಿ ಉತ್ತಮ ಆಗಿತ್ತು, ಮಂಗಳೂರಿನ ಮೇಳದಲ್ಲಿ ಜನರು ಕಡಿಮೆ, ಆದರೆ ಉತ್ತಮ ವ್ಯಾಪಾರ ಆಗಿದೆ. ವ್ಯಾಪಾರ ಆಗದೇ ಇರುವವರು ಬಂದ್ ಮಾಡಿಕೊಂಡು ಹೋಗುತ್ತಾರೆ. ಫುಡ್ ಕೋರ್ಟ್ ನಲ್ಲಿ ಸ್ವಲ್ಪ ಮಟ್ಟಿನ ವಹಿವಾಟು ಅಷ್ಟೊಂದು ಆಗಿಲ್ಲ. ಮೇಳಕ್ಕೆ ಸಾಕಷ್ಟು ಪ್ರಚಾರ ಮಾಡಲಾಗಿದೆ. ಬಂದವರು ಬೇಕಾದಷ್ಟು ಖರೀದಿ ಮಾಡಿದ್ದಾರೆ. ವ್ಯಾಪಾರಕ್ಕೆ ಬಂದವರು 1 ಲಕ್ಷದವರಿಗೆ ವಹಿವಾಟು ಮಾಡಿಕೊಂಡು ಹೋಗುತ್ತಿದ್ದಾರೆ. ಪರೀಕ್ಷೆ ಹಾಗೂ ರಂಜಾನ್ ಇರುವುದರಿಂದ ಜನರ ಕೊರತೆ ಇದೆ. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಸುತ್ತಿದ್ದೇವೆ. ಆದರೆ ಇನ್ಮುಂದೇ ಬೆಂಗಳೂರಿನಲ್ಲಿಯೇ ಮೇಳ ಆಯೋಜನೆ ಮಾಡುತ್ತೇವೆ ಎಂದು
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಹೆಚ್ಚುವರಿ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.