ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಕರಾವಳಿ ಭಾಗ ಸಂಪೂರ್ಣ ಕಡೆಗಣನೆ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕೆ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಈ ಭಾಗದ ಜನರು ಇಟ್ಟಿದ್ದ ಭರವಸೆ ಹುಸಿಯಾಗಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ₹4.48 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹51,591 ಕೋಟಿ ಮೀಸಲಿರಿಸಲಾಗಿದೆ. ಆದರೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ವಿಫಲವಾಗಿದ್ದು, ಅದನ್ನು ಸರಿದೂಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಾಗಿರುವ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ. ಇದರಿಂದ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಅವರು ದೂರಿದರು.

ಮತ ಬ್ಯಾಂಕ್ ರಾಜಕೀಯಕ್ಕಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ಉದ್ದೇಶದಿಂದ ಬಜೆಟ್‌ನಲ್ಲಿ ಅವರಿಗೆ ಹಲವು ಸೌಲಭ್ಯಗಳನ್ನು ಘೋಷಿಸಲಾಗಿದೆ. ಮೌಲಾನಾ ಆಜಾದ್ ಶಾಲೆಗಳಿಗೆ ಸುಮಾರು ₹600 ಕೋಟಿ, ಉರ್ದು ಶಾಲೆಗಳಿಗೆ ₹400 ಕೋಟಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಉದ್ಯೋಗ ಆರಂಭಿಸಲು ಶೇ.75 ಸಬ್ಸಿಡಿಯಲ್ಲಿ ₹3 ಲಕ್ಷದವರೆಗೆ ಸಾಲ ಸೌಲಭ್ಯ ನೀಡಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಆರೋಪಿಸಿದರು.

ಬಜೆಟ್‌ನಲ್ಲಿ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿ, ಕೈಗಾರಿಕಾ ಹೂಡಿಕೆ, ರೈತರ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸ್ಪಷ್ಟವಾದ ಯೋಜನೆಗಳಿಲ್ಲ ಎಂದು ಅವರು ಹೇಳಿದರು. ಉತ್ತರ ಕನ್ನಡ ಸೇರಿದಂತೆ ಬೆಳಗಾವಿ, ಕಲಬುರಗಿ, ಬೀದರ್, ಕೊಪ್ಪಳ, ವಿಜಯಪುರ ಮುಂತಾದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಅಗತ್ಯವಾದ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಒಣ ಪ್ರತಿಷ್ಠೆಗಾಗಿ ಸುಮಾರು ₹8 ಲಕ್ಷ ಕೋಟಿ ಸಾಲ ಮಾಡುವ ಸ್ಥಿತಿಗೆ ರಾಜ್ಯವನ್ನು ತಳ್ಳಿದ್ದಾರೆ. ವಾರ್ಷಿಕ ಆಯವ್ಯಯದ ಸುಮಾರು ಶೇ.20ರಷ್ಟು ಮೊತ್ತ ಸಾಲದ ಬಡ್ಡಿ ಪಾವತಿಗೆ ಹೋಗುವ ಆತಂಕವಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆ ಇದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಿಜೆಪಿ ಮುಖಂಡರಾದ ರವಿಶಂಕರ್ ಮುಜಾರು, ನಿತಿನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!