ಮಂಗಳೂರು ಜಂಕ್ಷನ್‌ನಲ್ಲಿ ಭರ್ಜರಿ ಕಾರ್ಯಾಚರಣೆ: 10 ಲಕ್ಷ ಮೌಲ್ಯದ 201 ಮೊಬೈಲ್ ವಶ

ಮಂಗಳೂರು: ಕೇರಳ ವಿಧಾನಸಭೆ ಚುನಾವಣೆಯ ಹಿನ್ನೆಲೆ ರೈಲುಗಳಲ್ಲಿ ತಪಾಸಣೆ ಬಿಗಿಗೊಳಿಸಿರುವ ರೈಲ್ವೇ ಪೊಲೀಸರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು ರೂ.10 ಲಕ್ಷ ಮೌಲ್ಯದ 201 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಮಾರ್ಚ್ 9ರಂದು ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಆಗಮಿಸಿದ ಜಾಮ್‌ನಗರ–ತಿರುನೆಲ್ವೇಲಿ ಜಂಕ್ಷನ್ ಎಕ್ಸ್‌ಪ್ರೆಸ್ ರೈಲುದಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ರೈಲಿನ ಸಾಮಾನ್ಯ ಬೋಗಿಯ ಮೇಲಿನ ಲಗೇಜ್ ರಾಕ್‌ನಲ್ಲಿ ವಾರೀಸುದಾರರು ಇಲ್ಲದ ಮೂರು ಬ್ಯಾಗ್‌ಗಳು ಪತ್ತೆಯಾದವು. ಅವುಗಳನ್ನು ಪರಿಶೀಲಿಸಿದಾಗ ಬ್ಯಾಗ್‌ಗಳಲ್ಲಿ ನೂರಾರು ಬಳಸಿದ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಆರ್‌ಪಿಎಫ್ ಹೆಡ್ ಕಾನ್ಸ್‌ಟೇಬಲ್ ಸುಜೀಶ್ ಮತ್ತು ಕಾನ್ಸ್‌ಟೇಬಲ್ ರಾಮಕೃಷ್ಣ ಅವರು ತಪಾಸಣೆ ನಡೆಸಿ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಚುನಾವಣಾ ಸಮಯದಲ್ಲಿ ನಗದು, ಚಿನ್ನ ಹಾಗೂ ಇತರ ಬೆಲೆಬಾಳುವ ವಸ್ತುಗಳ ಅಕ್ರಮ ಸಾಗಾಟವನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ವಿಶೇಷ ತಪಾಸಣಾ ಅಭಿಯಾನ ಕೈಗೊಳ್ಳಲಾಗಿತ್ತು.

ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಬ್ಯಾಗ್‌ಗಳು ಪತ್ತೆಯಾದ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ಅಪರಾಧ ವಿಭಾಗದ ಗುಪ್ತಚರ ದಳ (CIB) ಹಾಗೂ ರೈಲ್ವೆ ಪೊಲೀಸ್ (GRP) ಅಧಿಕಾರಿಗಳು ಇಬ್ಬರು ಶಂಕಿತರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ವಶಕ್ಕೆ ಪಡೆದ ಮೊಬೈಲ್‌ಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು, ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಯಾರು ಇದ್ದಾರೆ ಎಂಬುದರ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!