ಉಡುಪಿ: ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಉಂಟಾಗಿರುವ ಅನಿಲ ವ್ಯತ್ಯಯದ ಹಿನ್ನೆಲೆಯಲ್ಲಿ ಹೋಟೇಲ್ ಮಾಲಕರಿಗೆ ಎದುರಾಗುತ್ತಿರುವ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಎರಡು ದಿನಗಳೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದ ಡಯಾನ ಹೋಟೇಲ್ನಲ್ಲಿ ಉಡುಪಿ ಜಿಲ್ಲಾ ಹೋಟೇಲ್ ಮಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಾಣಿಜ್ಯ ಬಳಕೆಯ ಅನಿಲ ಅಲಭ್ಯತೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದ್ದು, ಒಂದು ವಾರದೊಳಗೆ ಸಮಸ್ಯೆ ಪರಿಹಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ತಾತ್ಕಾಲಿಕವಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಸಂದರ್ಭದಲ್ಲಿ ಲಭ್ಯವಿರುವ ಅನಿಲವನ್ನು ಸಮರ್ಪಕವಾಗಿ ಹೇಗೆ ವಿತರಿಸಬೇಕು ಎಂಬ ಬಗ್ಗೆ ಚಿಂತನೆ ಅಗತ್ಯವಿದೆ. ಈ ಸಮಸ್ಯೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳದೆ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕು ಎಂದು ಅವರು ಹೇಳಿದರು.
ಈ ಅವಧಿಯಲ್ಲಿ ಲಭ್ಯವಿರುವ ಸಿಲಿಂಡರ್ಗಳ ವಿತರಣೆಗೆ ವಿಧಿಸಿರುವ ಕೆಲವು ನಿಯಮಗಳನ್ನು ಸಡಿಲಗೊಳಿಸಿ ಹೋಟೇಲ್ ಮಾಲಕರಿಗೂ ಅನಿಲ ವಿತರಣೆ ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸಂಸದರು ಭರವಸೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಉಡುಪಿ ಪುತ್ರನ್ ಗ್ಯಾಸ್ ಸಂಸ್ಥೆಯ ಮಾಲಕ ದಿನೇಶ್ ಪುತ್ರನ್, ಸೋಮವಾರದಿಂದ (ಮಾರ್ಚ್ 9) ಡಿಸ್ಟ್ರಿಬ್ಯೂಟರ್ಗಳಿಗೆ ಗ್ಯಾಸ್ ಪೂರೈಕೆ ಆಗಿಲ್ಲ ಎಂದು ತಿಳಿಸಿದರು. ಲಭ್ಯವಿರುವ ಅನಿಲವನ್ನು ಶಾಲೆಗಳ ಬಿಸಿಯೂಟ ಯೋಜನೆ, ಆಸ್ಪತ್ರೆಗಳ ಕ್ಯಾಂಟೀನ್ ಹಾಗೂ ಇಂದಿರಾ ಕ್ಯಾಂಟೀನ್ಗಳಿಗೆ ಆದ್ಯತೆಯಾಗಿ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಗೃಹ ಬಳಕೆಯ ಅನಿಲ ಬುಕ್ಕಿಂಗ್ ಮೇಲೂ ಕೆಲ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಇದರಿಂದ ಪ್ಯಾನಿಕ್ ಬುಕ್ಕಿಂಗ್ ಆರಂಭವಾಗಿತ್ತು. ಆದರೆ ಗೃಹ ಬಳಕೆಯ ಗ್ಯಾಸ್ ವಿತರಣೆಯಲ್ಲಿ ಯಾವುದೇ ತೊಂದರೆ ಇಲ್ಲ, ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಷ್ಟೇ ಸಮಸ್ಯೆ ಎದುರಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಹೋಟೇಲ್ ಮಾಲಕರಾದ ಶಿವಪ್ರಸಾದ್ ಶೆಟ್ಟಿ ತಲ್ಲೂರು, ಉಡುಪಿ ಜಿಲ್ಲಾ ಹೋಟೇಲ್ ಮಾಲಕರ ಸಂಘದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ನಾಗೇಶ್ ಭಟ್, ಲಕ್ಷ್ಮಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.