ಉಡುಪಿ, ಜೂನ್ 26: ಅಪರೂಪದ ಕಲಾಕೃತಿಗಳ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅವರು ಮತ್ತೊಮ್ಮೆ ತಮ್ಮ ವಿಶಿಷ್ಟ ಕಲೆಯ ಮೂಲಕ ಸಮಾಜಮುಖಿ ಸಂದೇಶ ಸಾರಿದ್ದಾರೆ.
ಅಶ್ವತ್ಥ ಎಲೆಯಲ್ಲಿ ಖ್ಯಾತನಾಮರ ಭಾವಚಿತ್ರಗಳನ್ನು ಮೂಡಿಸುವ ಮೂಲಕ ಗುರುತಿಸಿಕೊಂಡಿರುವ ಮಹೇಶ್ ಮರ್ಣೆ, ವಿವಿಧ ಸಾಮಾಜಿಕ ಹಾಗೂ ರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ಕಲೆಯ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಾ ಬಂದಿದ್ದಾರೆ.
ಈ ಬಾರಿ ಜೂನ್ 28ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಹಿನ್ನೆಲೆಯಲ್ಲಿ, “5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ” ಎಂಬ ಸಂದೇಶವನ್ನು ಅಶ್ವತ್ಥ ಎಲೆಯಲ್ಲಿ ಸುಂದರವಾಗಿ ಮೂಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಜೂನ್ 28ರಂದು ಸಮೀಪದ ಲಸಿಕಾ ಕೇಂದ್ರಗಳಿಗೆ ಕರೆದೊಯ್ದು ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ಅವರು ಮನವಿ ಮಾಡಿದ್ದಾರೆ.
ಮಹೇಶ್ ಮರ್ಣೆ ಅವರ ಈ ವಿನೂತನ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾರ್ವಜನಿಕರಲ್ಲಿ ಪೋಲಿಯೋ ಲಸಿಕೆ ಕುರಿತು ಅರಿವು ಮೂಡಿಸುವಲ್ಲಿ ಪರಿಣಾಮಕಾರಿಯಾಗಿದೆ.